ಉಡುಪಿ:
ಉಡುಪಿ ಜಿಲ್ಲೆಯ ಶಿರ್ವದ ಪ್ರತಿಷ್ಠಿತ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂದನೀಯ ಮಹೇಶ್ ಡಿಸೋಜಾ (36) ಅವರು ಶುಕ್ರವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಶಾಲೆಯ ಕ್ಯಾಬಿನ್ ಒಳಗಿನ ಫ್ಯಾನಿಗೆ ನೇಣು ಬಿಗಿದ ಕ್ರೈಸ್ತ ಧರ್ಮಗುರು ವಂದನೀಯ ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದು,ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮಹೇಶ್ ಕಳೆದ ಕೆಲದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದರು ಎಂಬ ಬಗ್ಗೆ ಸಹವರ್ತಿಗಳ ಬಳಿಯೂ ಹೇಳಿಕೊಂಡಿರಲಿಲ್ಲ. ಡಾನ್ ಬಾಸ್ಕೊ ಶಾಲೆ ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟಿದ್ದು, ಮಹೇಶ್ ಡಿಸೊಜಾ ಪ್ರಾಂಶುಪಾಲರಾದ ಮೇಲೆ ಸಂಸ್ಥೆಗೆ ಅಡ್ಮೀಶನ್ ಜಾಸ್ತಿಯಾಗಿತ್ತು. ಪ್ರಾಂಶುಪಾಲರ ಈ ನಿರ್ಧಾರ ಊರಿನ ಜನರಲ್ಲಿ, ಶಾಲಾ ವಿದ್ಯಾರ್ಥಿಗಳು, ಪೋಷಕರ ತೀವ್ರ ನೋವಿಗೆ ಕಾರಣವಾಗಿದೆ.
ಮೃತ ಧರ್ಮಗುರುಗಳು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯವಾಗಿ ಉದಯವಾದ ಬಳಿಕ ಪ್ರಥಮ ಧರ್ಮಗುರುವಾಗಿ 2013ರಲ್ಲಿ ಗುರು ದೀಕ್ಷೆ ಪಡೆದಿದ್ದರು.
ಮೂಲತಃ ಮೂಡುಬೆಳ್ಳೆಯವರಾಗಿದ್ದ ಅವರು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿದ್ದರು.
ಘಟನಾ ಸ್ಥಳಕ್ಕೆ ಮಧ್ಯರಾತ್ರಿಯೇ ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಭೇಟಿ ನೀಡಿದ್ದಾರೆ.
ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ