ಲಖನೌ:
2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ನನ್ನು ಸದ್ಯ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಉತ್ತರ ಪ್ರದೇಶದ ಉನ್ನಾವೋದಲ್ಲಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಜೈಲಿನಲ್ಲಿದ್ದುಕೊಂಡೇ ಆಕೆಯ ಹತ್ಯೆಗೆ ಕುಲ್ದೀಪ್ ಸಿಂಗ್ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ರಾಯ್ ಬರೇಲಿ ಸಮೀಪ ಟ್ರಕ್ ಒಂದು ಸಂತ್ರಸ್ತೆಯಿದ್ದ ಕಾರ್‌ಗೆ ಡಿಕ್ಕಿ ಹೊಡೆದಿತ್ತು. ಅದರಲ್ಲಿ ಆಕೆಯ ಕುಟುಂಬದ ಇಬ್ಬರು ಮೃತಪಟ್ಟಿದ್ದರೆ, ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರ ಗಾಯಗೊಂಡಿದ್ದಾರೆ.
ಸಂತ್ರಸ್ತೆಯ ರಕ್ಷಣೆಗೆ 9 ಮಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಅಪಘಾತ ನಡೆದ ದಿನ ಕಾರ್‌ನಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ಕಾರ್‌ನಲ್ಲಿ ಜಾಗವಿಲ್ಲದ ಕಾರಣ ಬರುವುದು ಬೇಡ ಎಂದು ಸ್ವತಃ ಸಂತ್ರಸ್ತೆಯ ಕುಟುಂಬದವರೇ ಸಿಬ್ಬಂದಿಗೆ ಹೇಳಿದ್ದರು ಎಂದು ಹೇಳಲಾಗಿದೆ. ಅಪಘಾತ ನಡೆಸುವ ಉದ್ದೇಶದಿಂದ ಅವರ ಜತೆ ಹೋಗದಂತೆ ಪೊಲೀಸರಿಗೆ ಇಲಾಖೆ ಕಡೆಯಿಂದಲೇ ಸೂಚನೆ ಬಂದಿತ್ತು ಎಂದು ಆರೋಪಿಸಲಾಗಿದೆ.
ಆದ್ದರಿಮದ ಸಂತ್ರಸ್ತೆಯ ಭದ್ರತೆಗೆಂದು ನಿಯೋಜಿಸಲಾಗಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನೂ ಅಮಾನತುಗೊಳಿಸಲಾಗಿದೆ. ಇವರ ಪೈಕಿ ಇಬ್ಬರು ಮಹಿಳಾ ಪೊಲೀಸರೂ ಇದ್ದಾರೆ.
ಕುಲ್ದೀಪ್ ಹೆಸರು ಕೇಳಿಬಂದ ಬಳಿಕ ಭಾರತೀಯ ಜನತಾ ಪಾರ್ಟಿ ಮೇಲೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಶಾಸಕನ ಮೇಲೆ ಕಠಿಣ ಕ್ರಮ ಜರುಗಿಸಿವಂತೆ ಒತ್ತಾಯ ಮಾಡಲಾಗಿತ್ತು. ಹೀಗಾಗಿ ಎಚ್ಚೆತ್ತುಕೊಂಡ ಪಕ್ಷದ ಹಿರಿಯ ನಾಯಕರುಗಳು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
