ಮಗಳ ಸಾವಿನ ವಿಚಾರ ಕಂಡಕ್ಟರ್ ಗೆ ತಿಳಿಸದೇ ಅಮಾನವೀಯತೆ ಮೆರೆದ ಅಧಿಕಾರಿ!!

ಗಂಗಾವತಿ:

      ಮಗಳು ಟೈಫಾಯ್ಡ್ ಜ್ವರದಿಂದ ಬಳಲಿ ಮೃತಪಟ್ಟರೂ ಕರ್ತವ್ಯದಲ್ಲಿದ್ದ ತಂದೆಗೆ ವಿಷಯ ತಿಳಿಸದೇ ಅಮಾನವೀಯತೆ ಪ್ರದರ್ಶಿಸಿದ ಘಟನೆ ಗಂಗಾವತಿ ಈಶಾನ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಜರುಗಿದೆ.

     ಕೊಪ್ಪಳದ ಗಂಗಾವತಿ ಸಾರಿಗೆ ಘಟಕದಲ್ಲಿ ಈ ಅಮಾನವೀಯ ಪ್ರಸಂಗ ನಡೆದಿದ್ದು, ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ ನಿವಾಸಿ ಮಂಜುನಾಥ ಎನ್ನುವವರು ಗಂಗಾವತಿಯ ಸಾರಿಗೆ ಘಟಕದಲ್ಲಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಗಳು ಕವಿತಾ(11) ಬುಧವಾರ ಬೆಳ್ಳಿಗ್ಗೆ ಮೃತಪಟ್ಟಿದ್ದಾಳೆ. 

      ಕುಟುಂಬದ ಸದಸ್ಯರು ಮಂಜುನಾಥ್ ಅವರಿಗೆ ವಿಷಯ ತಿಳಿಸಲು ಮೊಬೈಲ್‍ಗೆ ಕರೆ ಮಾಡಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಕರ್ತವ್ಯ ನಿರ್ವಹಣೆ ವೇಳೆ ಚಾಲಕರು ಮತ್ತು ನಿರ್ವಾಹಕರು ಮೊಬೈಲ್ ಬಳಸಬಾರದು ಎಂದು ಕಟ್ಟಾಜ್ಞೆ ಹೊರಡಿಸಿದೆ. ಆಗಾಗಿ ಮಂಜುನಾಥ್ ಅವರು ತಮ್ಮ ಮೊಬೈಲ್‍ಅನ್ನು ಡಿಪೋದಲ್ಲೇ ಬಿಟ್ಟು ಹೋಗಿದ್ದರು.

      ಕಂಡಕ್ಟರ್ ಮಂಜುನಾಥ ಗಂಗಾವತಿ ಕೊಲ್ಲಾಪುರ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಮಂಜುನಾಥ್ ಮೊಬೈಲ್ ಗೆ ಬಂದ ಕರೆ ಸ್ವೀಕರಿಸಿದ ಈಶಾನ್ಯ ಸಾರಿಗೆಯ ಅಧಿಕಾರಿಗಳು ತಕ್ಷಣವೇ ಮಂಜುನಾಥ್ ರಿಗೆ ವಿಷಯ ಮುಟ್ಟಿಸಿಲ್ಲ. ಬದಲಾಗಿ ಗುರುವಾರ ಸಂಜೆ ಕರ್ತವ್ಯ ಮುಗಿಸಿದ ನಂತರ ಮಗಳು ಮೃತಪಟ್ಟಿರುವ ಘಟನೆಯನ್ನು ತಿಳಿಸಿದ್ದಾರೆ. ಮಗಳ ಸಾವಿನ ವಿಷಯ ತಡವಾಗಿ ತಿಳಿದರಿಂದ ಮಂಜುನಾಥ್ ದಿಗ್ಭ್ರಮೆಗೊಂಡಿದ್ದಾರೆ.

     ತಕ್ಷಣವೇ ಮನೆಗೆ ಕರೆ ಮಾಡಿದಾಗ ಅಂತ್ಯಕ್ರಿಯೆ ಮುಗಿಸಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕೊನೆಯ ಬಾರಿ‌ ಮಗಳ ಮುಖವನ್ನು ನೋಡದಂತಾಯಿತು ಎಂದು ಮಂಜುನಾಥ ಗೋಳಾಡಿದ್ದು ಎಂಥಹ ಕಲ್ಲು ಹೃದಯವನ್ನು ಕರಗಿಸುವಂತಿತ್ತು.

      ಈಶಾನ್ಯ ಸಾರಿಗೆಯ ಕಂಡಕ್ಟರ್ ಚಾಲಕರಿಗೆ ಈ ವಿಷಯ ತಿಳಿದು ಎಟಿಐ ಕ್ರಮ ಖಂಡಿಸಿದ್ದಾರೆ. ಡಿಪೋ ಮ್ಯಾನೇಜರ್ ಎಸ್.ಆರ್.ಸೋನ್ನದ್ ಅವರಿಗೆ ಮಾಹಿತಿ ತಿಳಿದ ತಕ್ಷಣ ಇನ್ನೋರ್ವ ಕಂಡಕ್ಟರ್ ಅವರನ್ನು ಜತೆ ಮಾಡಿ ರಾಂಪೂರ ಗ್ರಾಮಕ್ಕೆ ಕಳಿಸಿದ್ದಾರೆ. ನಿರ್ಲಕ್ಷ್ಯ ಮಾಡಿದ ಎಟಿಐ ವಿರುದ್ದ ಕ್ರಮ ಜರುಗಿಸುವಂತೆ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap