ಮಾಸ್ಕೋ :
ರಷ್ಯಾದ ಸುಖೋಯ್ ಸೂಪರ್ಜೆಟ್ 100 ಪ್ರಯಾಣಿಕರ ವಿಮಾನ ತುರ್ತು ಭೂಸ್ಪರ್ಶ ಮಾಡುವಾಗ ಉಂಟಾದ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 41 ಜನ ಸಾವನ್ನಪ್ಪಿರು ಘಟನೆ ರಷ್ಯಾದ ಮಾಸ್ಕೋ ನಗರದಲ್ಲಿ ಭಾನುವಾರ ನಡೆದಿದೆ.
ರಷ್ಯಾದ ಸುಖೋಯ್ ಸೂಪರ್ಜೆಟ್ 100 ವಿಮಾನ ಮಾಸ್ಕೋದಿಂದ ನಿನ್ನೆ ಇಳಿಸಂಜೆ 78 ಜನ ಪ್ರಯಾಣಿಕರ ಜೊತೆ ಮರ್ಮನ್ಸ್ಕ್ ನಗರಕ್ಕೆ ಹಾರಾಟ ಆರಂಭಿಸಿತ್ತು. ಆದರೆ, ಹಾರಾಟ ಆರಂಭಿಸಿದ್ದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಪೈಲಟ್ಗಳು ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ. ವೇಳೆ ರನ್ವೇಗೆ ಇಳಿಯುತ್ತಿದ್ದಂತೆ ವಿಮಾನ ನೆಲಕ್ಕೆ ಅಪ್ಪಳಿಸಿ ಇಂಜಿನ್ನಲ್ಲಿ ಅಗ್ನಿ ಕಾಣಿಸಿಕೊಂಡಿದೆ. ಪರಿಣಾಮ ವಿಮಾನದ ಮುಂಬದಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, 41 ಜನ ಮೃತಪಟ್ಟಿದ್ದಾರೆ.
ಅವಘಡದಲ್ಲಿ 37 ಜನರನ್ನು ರಕ್ಷಣೆ ಮಾಡಲಾಗಿದ್ದು, ಈ ಪೈಕಿ 11 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ತೀವ್ರ ಸಂತಾಪ ಸೂಚಿಸಿದ್ದರೆ, ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ನಂತರ ಅಪಘಾತದ ನಿಖರ ಕಾರಣ ತಿಳಿದುಬರಲಿದೆ.