ಮಂಡ್ಯ,:
ನನಗೆ ಸಮೀಕ್ಷೆಗಳ ಮೇಲೆ ನಂಬಿಕೆಯಿಲ್ಲ. ಕನಿಷ್ಠ 2 ಲಕ್ಷ ಮತಗಳ ಅಂತರದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ಪೇಟೆ ಪುರಸಭೆ ಚುನಾವಣೆಯ ಆಕಾಂಕ್ಷಿಗಳ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ನಾನು ಗೆದ್ದಿದ್ದೇನೆ. ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ. ಸಂಸದನಾಗಿ ಆಯ್ಕೆಯಾಗುವ ಖಚಿತ ವಿಶ್ವಾಸವಿದ್ದು, ಮೇ. 23ರ ನಂತರ ಜಿಲ್ಲೆಯಲ್ಲಿ ಪ್ರಥಮವಾಗಿ ಎಲ್ಲಾ ತಾಲ್ಲೂಕುಗಳಲ್ಲಿ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳ ನಡೆಸಿ ಯುವ ಜನರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಕೆಲಸವನ್ನು ನನ್ನ ಮಂಡ್ಯ ಲೋಕಸಭಾಕ್ಷೇತ್ರದ ಜನರಿಗಾಗಿ ಮಾಡುತ್ತೇನೆ ಎಂದರು.
ಲೋಕಸಭಾಚುನಾವಣೆ ಘೋಷಣೆಯಾದ ನಂತರ ನನ್ನ ಟೀಕೆ ಮಾಡಿ ಹಿನ್ನೆಡೆ ತರುವ ಸಲುವಾಗಿ ನಿಖಿಲ್ ಎಲ್ಲಿದ್ದಯಪ್ಪ ಟ್ರೋಲ್ ಮಾಡಿದ ವಿರೋಧಿಗಳ ಟೀಕೆಯು ವಿಶ್ವದಾದ್ಯಂತ ನನ್ನನ್ನು ಪರಿಚಯಿಸಿತು. ಅಲ್ಲದೆ ಕ್ಷೇತ್ರದಾದ್ಯಂತ ಮನೆ ಮನೆಗೆ ನನ್ನನ್ನು ಪರಿಚಯ ಮಾಡಿತು. ಇದರಿಂದ ನನಗೆ ಹೆಚ್ಚಿನ ಸಹಾಯಕವಾಯಿತೇ ಹೊರತು ಯಾವುದೇ ಹಿನ್ನೆಡೆಯಾಗಲಿಲ್ಲ ಹಾಗೇ ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಹಿರಿಯರಿದ್ದಾರೆ. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ . ಅವರು ಮೈತ್ರಿಧರ್ಮ ಪಾಲಿಸಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಉರಿ ಬಿಸಿಲಿನಲ್ಲಿಯೂ ನನ್ನ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ ನಾನು ಋಣಿಯಾಗಿರುತ್ತೇನೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ತಿಳಿಸಿದಂತೆ ಕನಿಷ್ಠ 2ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಮಂಡ್ಯದಲ್ಲಿ ಸ್ವಂತ ತೋಟ, ಮನೆ ಮಾಡುವ ಆಲೋಚನೆಯಿದೆ. ಹುಡುಕಾಟದಲ್ಲಿದ್ದೇನೆ. ತೋಟ ಕೊಂಡ ನಂತರ ಸ್ವಂತ ಮನೆಯ ಕೆಲಸ ಆರಂಬಿಸುತ್ತೇನೆ ಎಂದು ಹೇಳಿದರು. ಶಾಸಕ ನಾರಾಯಣಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
