ಬೆಂಗಳೂರು:
ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ಮಣಿದಿರುವ ರಾಜ್ಯ ಸರ್ಕಾರ, ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಕ್ಕೆ ಮೀಸಲು ಪ್ರಮಾಣ ಹೆಚ್ಚಳ ಮಾಡಲು ಸಮಿತಿ ಅಥವಾ ಆಯೋಗ ರಚನೆ ಮಾಡಲು ನಿರ್ಣಯಿಸಿದೆ.
ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಎಸ್ಟಿ ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಯಾವ ವರ್ಗದಿಂದ ಮೀಸಲಾತಿ ಪ್ರಮಾಣವನ್ನು ವರ್ಗಾಯಿಸಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆಯಾಗಿದೆ. ಈಗಿರುವ ಮೀಸಲಾತಿ ವ್ಯವಸ್ಥೆಯ ಬಗ್ಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸಂಪುಟಕ್ಕೆ ವಿಸ್ತೃತ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದುಳಿದ ವರ್ಗಗಳಿಂದ ಎಸ್ಟಿ ಸಮುದಾಯಕ್ಕೆ ಅನೇಕ ಜಾತಿಗಳು ಸೇರ್ಪಡೆ ಆಗಿರುವುದರಿಂದ ಎಸ್ಟಿ ಸಮುದಾಯದ ಜನಸಂಖ್ಯೆ ಹೆಚ್ಚಳವಾಗಿದೆ. ಆದರೆ, ಅದೇ ಪ್ರಮಾಣದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಿಲ್ಲ. ಹೀಗಾಗಿ ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇಕಡಾ 3 ರಿಂದ 7.5 ಕ್ಕೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ.
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಕೃಷ್ಣ ಬೈರೇಗೌಡ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.50 ಪ್ರಮಾಣವನ್ನು ಮೀರಿ ಮೀಸಲು ನೀಡಲು ಅವಕಾಶ ಇದೆಯಾ ಎನ್ನುವ ಕುರಿತಂತೆ ಪರಾಮರ್ಶೆ ಮಾಡಿ ವರದಿ ನೀಡಲು ಆಯೋಗ ರಚನೆ ಅಥವಾ ಸಮಿತಿ ರಚನೆಯ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡು ಮುಂದಿನ ಸಂಪುಟ ಸಭೆಗೆ ತರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನವನ್ನು ಜುಲೈ 12ರಿಂದ 26ರವರೆಗೆ ನಡೆಸಲು ಸಂಪುಟ ತೀರ್ಮಾನಿಸಿದೆ. ಬಜೆಟ್‌ನ ಮುಂದುವರೆದ ಅಧಿವೇಶನ ಇದಾಗಿದ್ದು, ರಾಜ್ಯ ಸರ್ಕಾರದ ಪೂರ್ಣ ಪ್ರರ್ಮಾಣದ ಬಜೆಟ್ನ್ನು ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಈ ಬಾರಿಯ ಮಳೆಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡಬೇಕೆಂಬ ಚರ್ಚೆ ನಡೆದಿತ್ತು. ಆದರೆ, ಈಗ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಕನಿಷ್ಠ ಒಂದು ತಿಂಗಳ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನ ತೆಗೆದುಕೋಂಡಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ