ಕೊಪ್ಪಳ :
ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ವಿಂಗ್ ಕಮಾಂಡರ್ ಅಭಿನಂದನ್ ಹೆಸರು ಬಳಕೆ ಮಾಡಿಕೊಂಡಿದ್ದಾರೆ. ಅಭಿನಂದನ್ ಹೆಸರನ್ನು ಬಳಕೆ ಮಾಡದಂತೆ ಚುನಾವಣಾ ಆಯೋಗ ಈ ಮೊದಲು ಆದೇಶ ಹೊರಡಿಸಿತ್ತು. ಆದರು ಶ್ರೀರಾಮುಲು ಪ್ರಚಾರದ ವೇಳೆ ಅಭಿನಂದನ್ ಹೆಸರು ಉಲ್ಲೇಖಿಸಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಡಾದಲ್ಲಿ ಶ್ರೀರಾಮುಲು ಪ್ರಚಾರದಲ್ಲಿ ತೊಡಗಿದ್ದರು. ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರ ಶ್ರೀರಾಮುಲು ಭಾಷಣ ಮಾಡುತ್ತಿದ್ದರು. ಈ ವೇಳೆ ಅಭಿನಂದನ್ ಅವರನ್ನು ತಾಯ್ನಾಡಿಗೆ ಮರಳಿ ತಂದಿದ್ದಕ್ಕೆ ಅವರು ಭಾರತ ಸರ್ಕಾರವನ್ನು ಹೊಗಳಿದ್ದಾರೆ.
ಶುಕ್ರವಾರ ರಾತ್ರಿ ಶ್ರೀರಾಮುಲು ಸಂಡೂರಿನ ಪ್ರಚಾರದಲ್ಲೂ ಅಭಿನಂದನ್ ಹೆಸರು ಬಳಕೆ ಮಾಡಿದ್ದರು. “ಮನಮೋಹನ್ ಸಿಂಗ್ ಅವರಂಥ ಪ್ರಧಾನಿ ಇದ್ದಿದ್ದರೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನದಿಂದ ವಾಪಸು ಕರೆತರಲು ಸಾಧ್ಯವಾಗುತ್ತಿರಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರೆ ನಮ್ಮ ಸೈನಿಕರು ಅಲ್ಲೇ ಸತ್ತು ಹೋಗುತ್ತಿದ್ದರು. ಗಂಡು ಮೆಟ್ಟಿದ ನಾಯಕ ಮೋದಿ ಪ್ರಧಾನಿ ಆಗಿರುವುದಕ್ಕೆ ಪಾಕ್ ಹೆದರಿ ಒಂದೇದಿನದಲ್ಲಿ ಅಭಿನಂದನ್ ಅವರನ್ನು ಬಿಡುಗಡೆ ಮಾಡಿದೆ,” ಎಂದಿದ್ದರು.
ಅವರ ಭಾಷಣದಲ್ಲಿ ಎರಡು-ಮೂರು ಬಾರಿ ಅಭಿನಂದನ್ ಹೆಸರು ಬಳಕೆ ಮಾಡಿದ್ದರು. ಈ ಮೊದಲು ಅಭಿನಂದನ್ ಹೆಸರು, ಭಾವಚಿತ್ರ ಬಳಸದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಸಿತ್ತು. ಈಗ ಶ್ರೀರಾಮುಲು ಈ ನಿಯಮ ಮೀರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಪಕ್ಷಗಳು ಆಗ್ರಹಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
