ದೆಹಲಿ:
ಗಂಡ ರಾಬರ್ಟ್ ವಾದ್ರಾ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ನಂತರ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಪ್ರಿಯಾಂಕ ಗಾಂಧಿ ಮತ್ತೆ ರಾಜಕೀಯ ಜೀವನಕ್ಕೆ ಧುಮುಕಿದ್ದಾರೆ. ಅದೂ ಈ ಬಾರಿ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಎಂಬುದು ಗಮನಾರ್ಹ. ಈ ಮೂಲಕ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಪ್ರಿಯಾಂಕ ಮೇಲೆ ರಾಜಕೀಯ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.
ರಾಬರ್ಟ್ ವಾದ್ರಾ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ನಂತರ ಸಾರ್ವಜನಿಕ ಜೀವನದಿಂದ ಪ್ರಿಯಾಂಕ ಗಾಂಧಿ ದೂರ ಉಳಿಯಲು ಇಚ್ಛಿಸಿದ್ದರು ಎಂಬ ಮಾತು ಕೇಳಿ ಬಂದಿತ್ತು. ಆ ಮಾತಿಗೆ ತಕ್ಕಂತೆ ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಗೆ ಬರುವ ಹೊತ್ತಿನಲ್ಲೇ ಪ್ರಿಯಾಂಕ ರಾಜಕೀಯದಿಂದ ದೂರ ಉಳಿದರು. ಆದರೀಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಸಕ್ರಿಯ ರಾಜಕಾರಣಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅಜ್ಜಿ ಇಂದಿರಾ ಗಾಂಧಿಯವರಂಥದ್ದೇ ವರ್ಚಸ್ಸನ್ನು ಪ್ರಿಯಾಂಕ ಹೊಂದಿದ್ದಾರೆ ಎಂಬ ಮಾತನ್ನು ಕಾಂಗ್ರೆಸ್ ಹಿರಿಯ ನಾಯಕರೇ ಹೇಳುತ್ತಿದ್ದರು.