ನವದೆಹಲಿ:
ಮೊದಲ ಹಂತದ ಲೋಕಸಭೆ ಚುನಾವಣೆ ಮುಗಿದ 11ದಿನಗಳ ನಂತರ ಮತದಾನ ಪ್ರಮಾಣ ಹಾಗೂ ಚುನಾವಣಾ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಕಳವಳ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದ ಮತದಾನದ ಶೇಕಡಾವಾರು ಡೇಟಾವನ್ನು ಹನ್ನೊಂದು ದಿನಗಳ ನಂತರ ಏಕೆ ಅಪ್‌ಲೋಡ್ ಮಾಡಲಾಗಿದೆ ಎಂದು ಗುರುವಾರ ಅವರು ಪ್ರಶ್ನಿಸಿದ್ದಾರೆ.
ಸಾರ್ವಜನಿಕರ ದೃಷ್ಟಿಯಲ್ಲಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಸಿಬಲ್, ಪಾರದರ್ಶಕತೆ ಮತ್ತು ಸಮಯೋಚಿತ ಮಾಹಿತಿಯ ಮಹತ್ವವನ್ನು ಒತ್ತಿ ಹೇಳಿದರು. “ಸುಪ್ರೀಂ ಕೋರ್ಟ್ ಇವಿಎಂಗೆ ಸಂಬಂಧಿಸಿದಂತೆ ತೀರ್ಪನ್ನು ನೀಡಿದೆ ಮತ್ತು ಪ್ರತಿಯೊಬ್ಬ ನಾಗರಿಕರು ಚುನಾವಣಾ ಆಯೋಗದ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದೆ.
ಆದರೆ, ಇಸಿ ಅಥವಾ ಇತರ ಯಾವುದೇ ಸಂಸ್ಥೆಗಳು ವಿಶ್ವಾಸಾರ್ಹವೇ? ಮೊದಲ ಹಂತದ ಚುನಾವಣೆ ಮುಗಿದ ನಂತರ ಸುಮಾರು 11ದಿನಗಳ ನಂತರ ಇಸಿ ವೆಬ್ ಸೈಟ್ ನಲ್ಲಿ ಡೇಟಾ ಮತ್ತು ಶೇಕಡಾವಾರು ಮತಗಳನ್ನು ಅಪ್‌ಲೋಡ್ ಮಾಡಲಾಗಿದೆ, ಕಾರಣ ಏನು ಎಂದು ನನಗೆ ತಿಳಿದಿಲ್ಲ ಎಂದು ಸಿಬಲ್ ಹೇಳಿದ್ದಾರೆ.
ವಿವರ ಬಿಡುಗಡೆ 11 ದಿನಗಳ ವಿಳಂಬ ಏಕೆ ಮಾಡಲಾಯಿತು ಎಂಬುದರ ಕುರಿತು ಆಯೋಗ ಸುದ್ದಿಗೋಷ್ಠಿ ನಡೆಸುವ ಮೂಲಕ ಕಳವಳಗಳನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು. ಹಿಂದಿನ ಚುನಾವಣಾ ಆಯುಕ್ತರೊಂದಿಗೆ ಮಾತನಾಡಿದ್ದು, ಅವರು ಚುನಾವಣಾ ಆಯೋಗದಲ್ಲಿದ್ದಾಗ ಅದೇ ದಿನ ಅಥವಾ ಮರುದಿನ ಬೆಳಿಗ್ಗೆ ಫಲಿತಾಂಶ ಪ್ರಕಟಿಸಿದ್ದಾಗಿ ಹೇಳಿದರು. ಆದರೆ ಈಗ 11 ದಿನ ಏಕೆ ತೆಗೆದುಕೊಳ್ಳಲಾಯಿತು. ಇಂತಹ ಅನುಮಾನಗಳು ಉಂಟಾದಾಗ ಜನರಲ್ಲಿ ಸಂಸ್ಥೆ ಮೇಲಿನ ನಂಬಿಕೆ ಕ್ಷೀಣಿಸುತ್ತದೆ ಎಂದು ಸಿಬಲ್ ಹೇಳಿದರು.