ಬೆಂಗಳೂರು:
ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವದ ಸಂಭ್ರಮ ಆರಂಭವಾಗಿದ್ದು, ಮಂಗಳವಾರ ಐತಿಹಾಸಿಕ ಕರಗ ಶಕ್ತ್ಯೋತ್ಸವ ನಡೆಯಲಿದೆ. ಎ. ಜ್ಞಾನೇಂದ್ರ ಅವರು 14ನೇ ಬಾರಿ ಬೆಂಗಳೂರು ಕರಗ ಹೊರಲಿದ್ದಾರೆ. ಈ ಸಂಭ್ರಮದ ದಿನ ಭಾರಿ ಜನ ಸೇರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಗರದ 4 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಏಪ್ರಿಲ್ 23 ರ ಬೆಳಗ್ಗೆ 6 ಗಂಟೆಯಿಂದ ಏಪ್ರಿಲ್ 24 ಬೆಳಗ್ಗೆ 10 ಗಂಟೆಯವರೆಗೆ ಬೆಂಗಳೂರು ನಗರದ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಆಯುಕ್ತ ದಯಾನಂದ ಆದೇಶ ನೀಡಿದ್ದಾರೆ.
ಸಿಟಿ ಮಾರ್ಕೆಟ್, ಕಲಾಸಿಪಾಳ್ಯಂ, ಕಾಟನ್‌ಪೇಟೆ ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ನಿರ್ಬಂಧ ಜಾರಿಯಲ್ಲಿರಲಿದೆ.
ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವದ ಮೆರವಣಿಗೆ ಇಂದು ರಾತ್ರಿಯಿಂದ ಆರಂಭವಾಗಲಿದೆ. ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ಕರಗ ಮಹೋತ್ಸವದ ಮೆರವಣಿಗೆ ಸಾಗಲಿದೆ. ಅದ್ಧೂರಿಯಾಗಿ ಕರಗ ಆಚರಣೆಗೆ ಕರಗ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಗ್ಗೆಯಿಂದ ಕರಗದ ಶಾಸ್ತ್ರಗಳು ಆರಂಭವಾಗಿ ಮಧ್ಯರಾತ್ರಿವರೆಗೂ ನಡೆಯಲಿದ್ದು, ಶಾಸ್ತ್ರಗಳು ಮುಗಿದ ನಂತರ ಮಧ್ಯರಾತ್ರಿ 2 ಗಂಟೆಗೆ ಅಧಿಕೃತವಾಗಿ ಕರಗ ಶಕ್ತ್ಯೋತ್ಸವ ಆರಂಭವಾಗಲಿದೆ.
ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ಕಬ್ಬನ್ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಲಿದೆ. ನಂತರ ಕೆಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ಆಗಮಿಸಲಿದೆ. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಗಲಿದೆ. ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್ ಪೇಟೆ ಮೂಲಕ ಬೆಳಗ್ಗೆ 6 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಲಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.