ರೂಪಿಸಿದ್ದ ಯೋಜನೆ ರೂಪುರೇಷೆ ಬದಲಾದೀತೆ ……?

ತರಾತುರಿಯಲ್ಲಿ ನಡೆಯುತ್ತಿರುವ ಕಾಮಗಾರಿ : ಸ್ಥಳೀಯರ ಆಕ್ರೋಶ

ತುಮಕೂರು

    ಸ್ಮಾರ್ಟ್ ಸಿಟಿಯ ಕಾರಿಯಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಯೂ ತಡವಾಗಿರುವುದು ಒಂದು ಸಮಸ್ಯೆಯಾದರೆ ಇದೀಗ ತರಾತುರಿಯಲ್ಲಿ ಕೆಲಸ ಮಾಡುತ್ತಾ ಮೃತ್ಯು ಕೂಪಕ್ಕೆ ದಾರಿ ಮಾಡಿಕೊಡುತ್ತಿದೆಯೇ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ.

    ಕೋಟ್ಯಂತರ ರೂಗಳನ್ನು ಖರ್ಚು ಮಾಡಿದ ಕಾಮಗಾರಿಯಲ್ಲಿ ಬದಲಾವಣೆ ಮಾಡಿದರೆ ಅದಕ್ಕೆ ನಿಗದಿ ಪಡಿಸಿದ ಯೋಜನೆ ವೆಚ್ಚವೇನಾದರೂ ಉಳಿದುಕೊಳ್ಳುವುದೆ..? ಅಥವಾ ಕೇವಲ ಜನರು ಆರೋಪಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕಾಮಗಾರಿಯಲ್ಲಿ ಬದಲಾವಣೆ ತಂದು ಕಾಮಗಾರಿ ಬೇಗ ಮುಗಿಸಿ ಕೈತೊಳೆದುಕೊಳ್ಳು ಪ್ಲಾನ್ ರೂಪಿಸಿದ್ದಾರೆಯೆ ಎಂಬ ಅನುಮಾನಗಳು ಈಗಾಗಲೇ ಮೂಡಿವೆ.

    ಕಾಮಗಾರಿ ಪ್ರಾರಂಭದ ಮುನ್ನ ರೂಪಿಸಲಾದ ಯೋಜನೆಯಂತೆ 3.5 ಮೀಟರ್‍ನಂತೆ ಎರಡು ಕಡೆಗಳಲ್ಲಿ ಮುಖ್ಯರಸ್ತೆ ಅಂದರೆ 22 ಅಡಿ ಅಗಲದ ರಸ್ತೆ, ಅದರ ಪಕ್ಕದಲ್ಲಿ ಪರಿಸರ ವ್ಯವಸ್ಥೆಗಾಗಿ ನಿರ್ದಿಷ್ಠ ಅಳತೆಯ ಜಾಗ, ಸೈಕಲ್ ಟ್ರ್ಯಾಕ್, ಫುಟ್‍ಪಾತ್, ವಾಹನ ನಿಲುಗಡೆಗೆ ವ್ಯವಸ್ಥೆ, ಲೈಟಿಂಗ್ ವ್ಯವಸ್ಥೆ, ಚರಂಡಿ ವ್ಯವಸ್ಥೆ ಮಾಡಬೇಕಾಗಿತ್ತು.. ಪರಿಸರ ವ್ಯವಸ್ಥೆಯಲ್ಲಿ 44 ಬೆಂಚುಗಳನ್ನು ಅಳವಡಿಸಿ ಕುಳಿತುಕೊಳ್ಳಲು ಅನುಕೂಲ ಮಾಡಲು ಯೋಜಿಸಬೇಕಾಗಿತ್ತು. 68 ಹೊಸ ಮರಗಳು, 541 ಹೊಸ ತಳಿಯ ಗಿಡಗಳನ್ನು ಹಾಕಲು ಯೋಜಿಸಲಾಗಿತ್ತು.

    ಈ ಯೋಜನೆಯ ಪ್ರಕಾರ ರಸ್ತೆಯ ಅಭಿವೃದ್ಧಿ ಮಾಡುವುದಾರೆ 60 ಅಡಿ ಇದ್ದ ರಸ್ತೆ ಕೇವಲ 22 ಅಡಿಗೆ ಸೀಮಿತವಾಗುತ್ತದೆ. ಇದರಿಂದ ವಾಹನಗಳ ಓಡಾಡಕ್ಕೆ ತೀವ್ರತರ ಸಮಸ್ಯೆ ಎದುರಾಗುತ್ತದೆ. ಈಗಿರುವ ರಸ್ತೆಯಲ್ಲಿಯೇ ನಿತ್ಯವೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆಯು ಚಿಕ್ಕದಾದರೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಸ್ಮಾರ್ಟ್ ಹೆಸರಲ್ಲಿ ಮಾಡುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ಅನನುಕೂಲವಾಗುವುದಾದರೆ ಕಾಮಗಾರಿ ಮಾಡುವುದು ವ್ಯರ್ಥವಾಗುವುದಿಲ್ಲವೇ..?

ನಗರದ ಮಧ್ಯಭಾಗದಲ್ಲಿರುವ ರಸ್ತೆ

   ಬಾರ್‍ಲೈನ್ ರಸ್ತೆಯ ನಗರದ ಮಧ್ಯಭಾಗದಲ್ಲಿರುವ ರಸ್ತೆಯಾಗಿದ್ದು, ನಗರದ ಹಲವು ಪ್ರಮುಖ ಪ್ರದೇಶಗಳಿಗೆ ತೆರಳಲು ಈ ರಸ್ತೆಯ ಮೂಲಕವೆ ಹಾದುಹೋಗಬೇಕಿದೆ. ಉದಾಹರಣೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಇದೇ ರಸ್ತೆ ಮೂಲಕ ಹೋಗಬೇಕು. ಮಹಾತ್ಮಗಾಂಧಿ ರಸ್ತೆ ಏಕಮುಖ ರಸ್ತೆಯಾಗಿದ್ದು, ಇಲ್ಲಿಂದ ಬೇರೆ ರಸ್ತೆಗೆ ಹೋಗಲು ಇಲ್ಲಿಂದಲೇ ಹೋಗಬೇಕು. ಹೊರಪೇಟೆ ರಸ್ತೆಗೆ ಹೀಗೆಯೆ ಹೋಗಬೇಕು. ಇಷ್ಟೇ ಇಲ್ಲದೆ ಇನ್ನಷ್ಟು ಹಲವು ಪ್ರಮುಖ ಸ್ಥಳಗಳಿಗೆ ಹೋಗಲು ಇಲ್ಲಿಂದಲೇ ತೆರಳಬೇಕು. ಹಾಗಾಗಿ ಇಲ್ಲಿ ನಿತ್ಯ ವಾಹನಗಳ ಸಂಚಾರ ಸಾಮಾನ್ಯವಾಗಿ ಹೆಚ್ಚಾಗಿಯೆ ಇರುತ್ತದೆ.

ಕನ್ಸರ್‍ವೆನ್ಸಿಗಳಲ್ಲಿ ವಾಹನಗಳ ನಿಲುಗಡೆ

    ಬಾರ್‍ಲೈನ್ ರಸ್ತೆಯಿಂದ ಎಂಜಿ ರಸ್ತೆ ಕಡೆಗೆ ಎರಡು ಕಡೆಗಳಲ್ಲಿ ಸ್ಮಾರ್ಟ್ ಸಿಟಿ ವತಿಯಿಂದಲೇ ಕನ್ಸರ್‍ವೆನ್ಸಿಯಲ್ಲಿ ವಾಹನ ನಿಲುಗಡೆ ಪ್ರದೇಶವಾಗಿ ಮಾರ್ಪಡಿಸಲಾಗಿದೆ. ಎಂಜಿ ರಸ್ತೆಗೆ ಬಂದವರಾಗಲಿ, ಬಾರ್‍ಲೈನ್ ರಸ್ತೆಗೆ ಬಂದವರಾಗಲಿ ತಮ್ಮ ವಾಹನಗಳನ್ನು ಕನ್ಸರ್‍ವೆನ್ಸಿಗಳಲ್ಲಿಯೆ ನಿಲ್ಲಿಸಬೇಕು ಎಂಬ ಕಾರಣಕ್ಕೆ ಪಾರ್ಕಿಂಗ್ ಸೌಲಭ್ಯ ಮಾಡಲಾಗಿದೆಯಾದರೂ ಬೆರಳೆಣಿಕೆಯಷ್ಟು ಮಾತ್ರ ವಾಹನಗಳು ನಿಲ್ಲಿಸಲಾಗಿರುತ್ತದೆ. ಉಳಿದಂತೆ ಹೆಚ್ಚಿನ ವಾಹನಗಳು ರಸ್ತೆಯ ಪಕ್ಕದಲ್ಲಿಯೆ ನಿಲ್ಲಿಸಲಾಗುತ್ತಿದೆ.

ಮುಚ್ಚಿದ ವ್ಯಾಪಾರ ವಹಿವಾಟು

    ರಸ್ತೆ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಇಲ್ಲಿಯವರೆಗೆ ಬಾರ್‍ಲೈನ್ ರಸ್ತೆ ಇನ್ನಿತರರ ರಸ್ತೆಗಳಲ್ಲಿರುವ ದೊಡ್ಡ ದೊಡ್ಡ ಮಳಿಗೆಗಳಲ್ಲಿ ಹಾಗೂ ಫುಟ್‍ಪಾತ್ ವ್ಯಾಪರ ತೀವ್ರವಾಗಿ ಕ್ಷೀಣಿಸಿದೆ. ಬರೊಬ್ಬರು 50 ರಿಂದ 70% ರಷ್ಟು ವ್ಯಾಪಾರ ಕ್ಷೀಣಿಸಿದ್ದು, ಕೆಲವು ಮಳಿಗೆಗಳು ಮುಚ್ಚಿಕೊಂಡು ಹೋಗಿವೆ. ವ್ಯಾಪಾರಸ್ಥರು ತಮ್ಮ ದೈನಂದಿನ ಖರ್ಚನ್ನು ಸಹ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಸಾಕಷ್ಟು ವ್ಯಾಪಾಟ ವಹಿವಾಟು ಎಕ್ಕುಟ್ಟಿ ಹೋಗಿದೆ. ಈಗಿನ ಆರ್ಥಿಕ ಮುಗ್ಗಟ್ಟಿನಿಂದ ವ್ಯಾಪಾರಸ್ಥರು ಪರದಾಡುವ ಈ ವೇಳೆಯಲ್ಲಿ ಕಾಮಗಾರಿಗಳ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಾಮಗಾರಿಯಿಂದ ಧೂಳು

    ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಧೂಳು ಏಳುತ್ತಿದ್ದು, ಇದರಿಂದ ಇಲ್ಲಿ ಓಡಾಡುವರರ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅನೇಕ ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಧೂಳಿನ ಸಮಸ್ಯೆಯಿಂದ ಸಾಕಷ್ಟು ಜನ ಈ ಭಾಗದಲ್ಲಿ ಓಡಾಡುವುದನ್ನೆ ಬಿಟ್ಟಿದ್ದಾರೆ. ಇತರೆ ಮಾರ್ಗಗಳನ್ನು ನೋಡಿಕೊಂಡು ಓಡಾಡುತ್ತಿದ್ದಾರೆ. ಅಲ್ಲದೆ ಧೂಳಿನ ಸಮಸ್ಯೆಯಿಂದ ತಿನ್ನುವ ಪದಾರ್ಥಗಳ ಮಾರಾಟ ಮಾಡುವವರ ಜೀವನ ದುಸ್ತರವಾಗಿದೆ.

ಮಳೆ ಬಂದರೆ ನೀರು ನಿಲ್ಲುವ ಸಾಧ್ಯತೆ

   ಹಾಲಿ ಅಭಿವೃದ್ಧಿ ಮಾಡುತ್ತಿರುವ ರಸ್ತೆಯಲ್ಲಿ ಮಳೆ ನೀರು ಹರಿಯಲು ಯಾವುದೇ ಸೌಲಭ್ಯ ಮಾಡದೆ ಈಗಾಗಲೆ ಫುಟ್‍ಪಾತ್ ನಿರ್ಮಾಣ ಮಾಡುತ್ತಿದ್ದಾರೆ. ಒಂದು ಬಾರಿ ಫುಟ್‍ಪಾತ್ ನಿರ್ಮಾಣ ಮುಗಿದಿದೆ ಎಂದರೆ ಮತ್ತೆ ಅಲ್ಲಿ ಅಗೆಯುವುದಿಲ್ಲ ಎಂದರ್ಥ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಳೆ ಬಂದಾಗ ನೀರು ನಿಂತುಕೊಂಡು ಮತ್ತೆ ಸಮಸ್ಯೆಗಳು ಉದ್ಭವವಾಗುತ್ತದೆ. ಈ ಭಾಗದ ಹಲವು ಕಡೆಗಳಲ್ಲಿ ಚರಂಡಿ ಸೌಲಭ್ಯವೇ ಇಲ್ಲ. ನೂತನವಾಗಿ ಮಾಡಿದ ಚರಂಡಿಯಲ್ಲೂ ಕಸ ತುಂಬಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಕೂಡ ಸಮಸ್ಯೆಯಾಗಿ ಪರಿಣಮಿಸಲಾಗುವುದಿಲ್ಲವೆ..?

ಚೇಂಬರ್‍ಗಳಿಂದ ಸಂಪರ್ಕ ಹೇಗೆ?

   ಕಾರಿಯಪ್ಪ ರಸ್ತೆಯಲ್ಲಿ 11 ಕಡೆಗಳಲ್ಲಿ ಯುಟಿಲಿಟಿ ಚೇಂಬರ್‍ಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ವಿದ್ಯುತ್ ಕೇಬಲ್ , ನೀರು ಸರಬರಾಜು, ದೂರವಾಣಿ ಮತ್ತು ಇಂಟರ್ ನೆಟ್ ಸೌಲಭ್ಯವುಳ್ಳ ಕೇಬಲ್‍ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಪಕ್ಕದಲ್ಲಿ ಬರುವ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ, ಇಂಟರ್‍ನೆಟ್ ಸೌಲಭ್ಯ ಪಡೆಯಲು ಯಾವ ರೀತಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂಬುದು ಪ್ರಶ್ನಾತೀತವಾಗಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ಸಂಪರ್ಕ ಪಡೆಯಬೇಕಾದರೆ ಮತ್ತೆ ಫುಟ್‍ಪಾತ್ ಅನ್ನು ಅಗೆಯಲೇಬೇಕಾಗುತ್ತದೆ.

    ಹಾಲಿ ಮಾಡುತ್ತಿರುವ ರಸ್ತೆ ಕಾಮಗಾರಿಯಲ್ಲಿ ಈಗಾಗಲೆ ಫುಟ್ ಪಾತ್ ಮಾಡಲಾಗುತ್ತಿದೆ. ಇಲ್ಲಿ ಎಲ್ಲಿಯೂ ಮಳೆ ನೀರು ಸರಾಗವಾಗಿ ಹರಿಯಲು ಸ್ಥಳಾವಕಾಶ ಮಾಡಿಲ್ಲ. ಬೇಸಿಗೆಕಾಲ ಪ್ರಾರಂಭವಾಗುತ್ತಿದೆ. ಮಳೆಗಾಲದಲ್ಲಿ ಜೋರಾದ ಮಳೆ ಬಂದರೆ ಮಾಡಲಾದ ಕಾಮಗಾರಿ ಸಂಪೂರ್ಣ ವ್ಯರ್ಥವಾಗಲಿದೆ.

ನಿಸಾರ್ ಅಹಮ್ಮದ್, ಸ್ಥಳೀಯ ವ್ಯಕ್ತಿ

    ಬಾರ್‍ಲೈನ್ ರಸ್ತೆಯಲ್ಲಿ ಫುಟ್‍ಪಾತ್ ಅಳತೆ ಹೆಚ್ಚಾಗಿದ್ದು, ರಸ್ತೆ ಕಿರಿದಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಮೇಯರ್ ವೀಕ್ಷಣೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ನಾನು ಸ್ಥಳ ಪರಿಶೀಲನೆ ಮಾಡಿದ್ದು, ಫುಟ್‍ಪಾತ್‍ನ ಅಳತೆ ಕಡಿಮೆ ಮಾಡಲು ಸೂಚಿಸಿದ್ದೇನೆ.

ಟಿ.ಭೂಬಾಲನ್, ಎಂ.ಡಿ, ಸ್ಮಾರ್ಟ್ ಸಿಟಿ

      ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಸರಿಯಾದ ವ್ಯಾಪಾರವಿಲ್ಲ. ಧೂಳಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಈಗಿರುವ ಜನಸಂದಣಿಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಮುಂದಿನ ಐದು ವರ್ಷದಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದರೆ ಸ್ಮಾರ್ಟ್ ಸಿಟಿ ಎಂದು ಇರುವ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಚೇಂಬರ್‍ಗಳನ್ನು ಮಾಡಿದ್ದಾರೆ. ಇದರಲ್ಲಿ ಅಳವಡಿಸಲಾದ ಪೈಪುಗಳ ಮೂಲಕ ಯಾವ ಕೇಬಲ್‍ಗಳು ಹೋಗುತ್ತಿಲ್ಲ. ಹಾಗಾಗಿ ಬೆಸ್ಕಾಂ ಸೇರಿದಂತೆ ಇತರೆ ಕೇಬಲ್‍ಗಳನ್ನು ಮೇಲ್ಭಾಗದಲ್ಲಿ ಹಾಕಲಾಗಿದೆ. ಇದರ ಮೇಲೆ ಮಣ್ಣನ್ನು ಹಾಕಿ ಫುಟ್‍ಪಾತ್ ಮಾಡುತ್ತಿದ್ದು, ಜೋರಾದ ಮಳೆ ಬಂದರೆ ಮಣ್ಣು ಕುಸಿದು ಫುಟ್‍ಪಾತ್ ವ್ಯರ್ಥವಾಗುತ್ತದೆ.

ವಿಠ್ಠಲ್‍ರಾವ್, ವಿಠ್ಠಲ್ ಮೊಮೆಂಟೋಸ್‍ನ ಮಾಲಿಕ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap