ಐಪಿಎಲ್ ಬೆಟ್ಟಿಂಗ್ ದಂಧೆಗೆ ಕಡಿವಾಣ : ವಿಶೇಷ ಕಾರ್ಯಾಚರಣೆ

ಹುಬ್ಬಳ್ಳಿ:

    ವಾಣಿಜ್ಯನಗರಿಯಲ್ಲಿ ಈಗಾಗಲೇ ಐಪಿಎಲ್ ಕ್ರೇಜ್ ಹೆಚ್ಚಾಗಿದೆ. ಶನಿವಾರದಿಂದ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ  ಆರಂಭವಾಗಲಿದೆ‌. ಇದನ್ನೇ ಬಂಡವಾಳ ಮಾಡಿಕೊಳ್ಳುವ ಬೆಟ್ಟಿಂಗ್ ಕುಳಗಳು ಎದ್ದು ಕುಳಿತಿದ್ದು, ಇಂತಹ ಬೆಟ್ಟಿಂಗ್‌ ದಂಧೆ ನಡೆಸುವವರ ವಿರುದ್ಧ ಹು–ಧಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.ಈ ನಿಟ್ಟಿನಲ್ಲಿ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರು ಪೊಲೀಸ್‌ ಅಧಿಕಾರಿಗಳ ಹಾಗೂ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ಜೊತೆ ಸಭೆ ನಡೆಸಿ ಬೆಟ್ಟಿಂಗ್‌ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಸಿಸಿಬಿ ಪೊಲೀಸರ ನೆರವಿನಿಂದ ಕಾರ್ಯಾಚರಣೆಗಾಗಿಯೇ ವಿಶೇಷ ತಂಡ ರಚಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

    ಈವರೆಗೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ಹಾಗೂ ಅದರಲ್ಲಿ ಪಾಲ್ಗೊಂಡಿರುವವರ ವಿವರ ಪಡೆದು, ಅವರ ಚಲನವಲನದ ಮೇಲೆ ನಿಗಾ ಇಡಲು ಸೂಚಿಸಿದ್ದಾರೆ. ಅಲ್ಲದೆ, ಯಾವ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಬೆಟ್ಟಿಂಗ್‌ ನಡೆಯುತ್ತಿದೆ ಎನ್ನುವ ಕುರಿತು ಮಾಹಿತಿ ಪಡೆದಿದ್ದಾರೆ.

   ಪಂದ್ಯಾವಳಿ ಸಂದರ್ಭದಲ್ಲಿ ಹೇಗೆ ಕಾರ್ಯಾಚರಣೆ ನಡೆಸಬೇಕು,  ಮುನ್ನೆಚ್ಚರಿಕೆಯಾಗಿ ಅನುಸರಿಸಬೇಕಾದ ಕ್ರಮ, ಬೆಟ್ಟಿಂಗ್ ಕುಳ ಹಿಡಿಯಲು‌ ಬಳಸಬೇಕಾದ  ತಂತ್ರಜ್ಞಾನಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಅವಳಿನಗರದಲ್ಲಿ ಬೆಟ್ಟಿಂಗ್‌ನಲ್ಲಿ ದಂಧೆ ನಡೆಯುತ್ತಿರುವ ಮಾಹಿತಿ ಇದ್ದರೆ, ಸಾರ್ವಜನಿಕರು 112 ಕ್ಕೆ ಕರೆ ಮಾಡಿ ತಿಳಿಸಬಹುದು.  ವಿಶೇಷ ಕಾರ್ಯಾಚರಣೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.