ಆಂಧ್ರಪ್ರದೇಶ :
ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ತೆರಳುತ್ತಾರೆ. ಆದರೆ ಎಲ್ಲರಿಗೂ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ಕೊಠಡಿಗಳು ಸಿಗಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಭಕ್ತರಿಗೆ ಕರ್ನಾಟಕ ಭವನದಲ್ಲೇ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಭವನ ನಿರ್ಮಾಣ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
7.5 ಎಕರೆ ಪ್ರದೇಶದಲ್ಲಿ ಈ ವಸತಿ ಗೃಹ ನಿರ್ಮಾಣವಾಗಲಿದ್ದು, 3 ಲಕ್ಷ ಚದರ ಅಡಿ ಜಾಗದಲ್ಲಿ ಸಂಪಿಗೆ, ಸೇವಂತಿಗೆ, ತಾವರೆ ಮತ್ತು ಮಲ್ಲಿಗೆ ಹೆಸರಿನ ನಾಲ್ಕು ಭವ್ಯ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.ಈ ನಾಲ್ಕು ಹೊಸ ಕಟ್ಟಡ ನಿರ್ಮಾಣ ಹೊಣೆಯನ್ನು ಟಿಟಿಡಿ ವಹಿಸಿಕೊಂಡಿದೆ. ಈ ಹಿಂದೆ ಇದ್ದ ಕನಕಾಂಬರ ಎಂಬ ಹೆಸರಿನ ಕಟ್ಟಡವನ್ನು ನವೀಕರಣ ಮಾಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಭಕ್ತರಿಗೆ ಕರ್ನಾಟಕ ಭವನದಲ್ಲೇ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ನೂತನ ಭವನ ನಿರ್ಮಾಣವಾದರೆ ಪ್ರತೀ ದಿನ 1,800 ಭಕ್ತರು ಉಳಿದುಕೊಳ್ಳಬಹುದು. ಕಾರ್ಯಕ್ರಮದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಲ್ಲದೆ ಟಿಟಿಡಿ ಚೇರ್ಮನ್ ಸುಬ್ಬಾ ರೆಡ್ಡಿ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಗಣ್ಯರು ಹಾಜರಿದ್ದರು.
ಶಿಲಾನ್ಯಾಸ ಕಾರ್ಯಕ್ರಮಕ್ಕೂ ಮುನ್ನ ಯಡಿಯೂರಪ್ಪ ಹಾಗೂ ಜಗನಮೋಹನ್ ರೆಡ್ಡಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
