ಬೆಂಗಳೂರು
ಡೀಸೆಲ್ ದರ ಏರಿಕೆ ವಿರೋಧಿಸಿ ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ ಮಧ್ಯರಾತ್ರಿಯಿಂದ ಆರಂಭವಾಗಿದೆ. ಬೆಂಗಳೂರಿನಲ್ಲಿ ಲಾರಿ ಹಾಗೂ ಟ್ರಕ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಯಶವಂತಪುರದ ಟ್ರಕ್ ಟರ್ಮಿನಲ್ನಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂದಿದೆ. ದಿನಸಿ, ತರಕಾರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಗಾಟ ಮಾಡುವ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ. ಹೆದ್ದಾರಿ ಹಾಗೂ ನಿಲ್ದಾಣಗಳಲ್ಲಿ ಲಾರಿ ನಿಲ್ಲಿಸಿ ಚಾಲಕರು ಕೂಡ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ಲಾರಿ ಮಾಲೀಕರ ಬೇಡಿಕೆಗಳೇನು?
- ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಆದೇಶ ಹಿಂಪಡೆಯಬೇಕು
- ರಾಜ್ಯದ ಹೆದ್ದಾರಿ ಟೋಲ್ಗಳಲ್ಲಿನ ಹಣ ವಸೂಲಿ ತಡೆಯಬೇಕು
- ಗಡಿಗಳಲ್ಲಿ ಆರ್ಟಿಒ ಚೆಕ್ಪೋಸ್ಟ್ಗಳನ್ನು ತೆರವು ಮಾಡಬೇಕು
- ಎಫ್ಸಿ ಫಿಟ್ನೆಸ್ ಶುಲ್ಕ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು
- ಗೂಡ್ಸ್ ವಾಹನಗಳಿಗೆ ಬೆಂಗಳೂರು ಪ್ರವೇಶ ನಿರ್ಬಂಧ ಆದೇಶ ಹಿಂಪಡೆಯಬೇಕು
- ಲಾರಿ ಚಾಲಕರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ತಡೆಯಬೇಕು
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಗಿದಂತಾಗಿದೆ ನಮ್ಮ ಸ್ಥಿತಿ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಗಳದಲ್ಲಿ ನಮಗೆ ಸಮಸ್ಯೆ ಆಗಿದೆ. ಹೀಗಾಗಿ ಲಾರಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದು ಲಾರಿ ಚಾಲಕ ಕುಮಾರ್ ಎಂಬವರು ಮೈಸೂರಿನಲ್ಲಿ ‘ಟಿವಿ9’ಗೆ ತಿಳಿಸಿದ್ದಾರೆ. ಪ್ರತಿ ನಿತ್ಯ ನೂರಾರು ಲಾರಿಗಳು ಓಡಾಡುತ್ತಿದ್ದವು. ಇಂದು ಒಂದೇ ಒಂದು ಲಾರಿ ರಸ್ತೆಗಿಳಿಯುವುದಿಲ್ಲ. ನಮ್ಮ ಬೇಡಿಕೆ ಈಡೇರಿಸುವವರೆಗೂ ಲಾರಿ ಓಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
