ಜಾತ್ರೆಗೆ ತೆರಳಿದ್ದ ದೋಣಿಯೊಂದು ಮರಳಿ ಬರುತ್ತಿರುವಾಗ ಮುಗುಚಿ ಬಿದ್ದ ಪರಿಣಾಮ 8 ಜನ ಜಲಸಮಾಧಿ!!

ಕಾರವಾರ:

  ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿರುವ ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿಯೊಂದು ಮರಳಿ ಬರುತ್ತಿರುವಾಗ ಮುಗುಚಿ ಬಿದ್ದ ಪರಿಣಾಮ 8 ಜನ ಜಲಸಮಾಧಿಯಾಗಿದ್ದು, 7 ಜನರು ಕಣ್ಮರೆಯಾದ ಘಟನೆ ಸೋಮವಾರ ನಡೆದಿದೆ.

ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಇನ್ನು ಮೃತಪಟ್ಟವರಲ್ಲಿ ಕಿರಣ (4) , 3 ವರ್ಷದ ಒಬ್ಬ ಬಾಲಕ, ಐವರು ಮಹಿಳೆಯರು, ಇಬ್ಬರು ಪುರುಷರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಕಾರವಾರದ ಸಮೀಪದ ಕಡವಾಡದ ಗಣಪತಿ ಕೊಠಾರಕರ್, ಮೀನಾಕ್ಷಿ ಕೊಠಾರಕರ್, ರಾಮನಗುಳಿಯ ನಿಲೇಶ್, ಕೆಹೆಚ್‍ಬಿ ಕಾಲೋನಿಯ ಅಣ್ಣಪ್ಪ ಇಂಗಳದಾಳ್, ಪೊಂಡಾದ ಗೀತಾ ಜನ್ಮೋಜಯ ತಳೇಕರ್, ಹಾವೇರಿ ಜಿಲ್ಲೆ ಶಿಗ್ಗಾವಿಯ ಬಾಲಕ ಅರುಣ್, ಮಂಜವ್ವ ಮತ್ತು ಭಾರತಿ ಎಂದು ಗುರುತಿಸಲಾಗಿದೆ. ಇನ್ನು 18 ಜನರನ್ನು ರಕ್ಷಣೆ ಮಾಡಲಾಗಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪಲ್ಟಿ ಹೊಡೆದ ಬೋಟ್!

ಕಡಲತೀರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಆಮೆಯಾಕರದ ಕೂರ್ಮಗಡ ದ್ವೀಪದ ಜಾತ್ರೆಗೆ ತೆರಳಿ, ಸುಮಾರು 2 ಗಂಟೆಗೆ ವಾಪಸ್ಸಾಗುತ್ತಿದ್ದರು. ಆದರೆ, ಅಲೆಗಳ ರಭಸಕ್ಕೆ ಮಧ್ಯ ಭಾಗಕ್ಕೆ ಬರುತ್ತಿದ್ದಂತೆ ದೋಣಿ ಪಲ್ಟಿಯಾಗಿದೆ. ನೀರಿಗೆ ಬಿದ್ದವರು ಗಾಬರಿಗೊಂಡು ಮತ್ತೆ ಬೋಟ್ ಹಿಡಿದು ಹತ್ತಲು ಮುಂದಾದಾಗ ಮತ್ತೇ ಪಲ್ಟಿ ಹೊಡೆದಿದೆ. ಘಟನೆಯಿಂದ ಈಜು ಬಂದವರು ಸಮೀಪದ ಬೋಟ್‍ಗೆ ತೆರಳಿ ಹತ್ತಿಕೊಂಡಿದ್ದಾರೆ. ಇನ್ನು ಈಜುಬಾರದ ಮತ್ತು ಕೆಲ ಮಹಿಳೆಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕಿ ಹಾಗೂ ಬೆಂಬಲಿಗರ ನೆರವು:

ದುರಂತಕ್ಕೀಡಾದ ಬೋಟ್ ಹಿಂದೆಯೇ ಶಾಸಕಿ ರೂಪಾಲಿ ನಾಯ್ಕ ಹಾಗೂ ಅವರ ಬೆಂಬಲಿಗರು ಜಾತ್ರೆಗೆ ಆಗಮಿಸುತ್ತಿದ್ದರು. ಈ ವೇಳೆ ಸಂಭವಿಸಿದ ದುರಂತವನ್ನು ಕಣ್ಣೆದುರೆ ಕಂಡ ಅವರ ಬೆಂಬಲಿಗರು ತಕ್ಷಣ ಈಜಾಡಿಕೊಂಡು ಒಟ್ಟು ಎಂಟು ಜನರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಕರಾವಳಿ ತಟರಕ್ಷಕ ಸಿಬ್ಬಂದಿಯೂ ಆಗಮಿಸಿ ಇವರಿಗೆ ಸಹಾಯ ಮಾಡಿದ್ದಾರೆ.

ಲೈಫ್ ಜಾಕೇಟ್ ಇದ್ದು ಬಳಸದಿರುವುದು ಘೋರ ದುರಂತಕ್ಕೆ ಕಾರಣವೇ?

ದುರಂತಕ್ಕೀಡಾದ ದೋಣಿಯಲ್ಲಿ ಸಾಕಷ್ಟು ಲೈಫ್ ಜಾಕೇಟ್ ಇದ್ದರೂ ಅದನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಲಾಗಿತ್ತು. ಅಲ್ಲದೆ 24 ಜನರು ಕುಳಿತುಕೊಳ್ಳಬಹುದಾದ ಬೋಟ್‍ನಲ್ಲಿ 33 ಜನರನ್ನು ತುಂಬಿಕೊಂಡು ಬರಲಾಗುತ್ತಿತ್ತು. ಇದೇ ಘೋರ ದುರಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಲೈಫ್ ಜಾಕೇಟ್ ಸುಲಭವಾಗಿ ಸಿಗುವ ಹಾಗಿದ್ದರೆ ಜೀವಪಾಯದಿಂದ ಪಾರಾಗುವ ಅವಕಾಶವಿತ್ತು ಎನ್ನುತ್ತಾರೆ ಸ್ಥಳೀಯ ಮೀನುಗಾರರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link