ಎಲ್ಲಾ ಚಿತ್ತ ಕಾವೇರಿ ಪ್ರಾಧಿಕಾರದ ಸಭೆಯತ್ತ

ಬೆಂಗಳೂರು

     ತಮಿಳುನಾಡಿಗೆ 18 ದಿನಗಳ ಕಾಲ ನಿತ್ಯ 3000 ಕ್ಯುಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸು ಬಗ್ಗೆ ನಿರ್ಣಯ ಕೈಗೊಳ್ಳುವ ಸಂಬಂಧ ಕಾವೇರಿ ನೀರುನಿರ್ವಹಣಾ ಪ್ರಾಧಿಕಾರ ಶುಕ್ರವಾರ ಸಭೆ ನಡೆಸಲಿದೆ.

      ಇದರಲ್ಲಿ ಕರ್ನಾಟಕ, ತಮಿಳುನಾಡು ರಾಜ್ಯಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದು, ತಮ್ಮ ತಮ್ಮ ಅಹವಾಲು ಮಂಡನೆ ಮಾಡಲಿದ್ದಾರೆ. ಏತನ್ಮಧ್ಯೆ, ಕಾವೇರಿ ವಿಚಾರವಾಗಿ ಕಾನೂನು ಹೋರಾಟ ತೀವ್ರಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಇಂದು ಬೆಳಿಗ್ಗೆ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸುತ್ತಿದೆ.

     ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸಭೆಯಲ್ಲಿ ರಾಜ್ಯವು ವಾಸ್ತವಿಕ ಸ್ಥಿತಿಯನ್ನು ಪ್ರಸ್ತುತಪಡಿಸಲಿದೆ. ಆದಾಗ್ಯೂ ಸಿಡಬ್ಲ್ಯೂಎಂಎ ಏನನ್ನು ಶಿಫಾರಸು ಮಾಡುತ್ತಿದೆ ಎಂಬುದನ್ನು ಕಾದು ನೋಡೋಣ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

    ಕಾವೇರಿ ವಿವಾದದ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಸಭೆ ಕರೆಯಲಿದ್ದು, ಸಭೆಯಲ್ಲಿ ಕೃಷಿ ಮತ್ತು ನೀರಾವರಿ ತಜ್ಞರು ಭಾಗವಹಿಸಲಿದ್ದಾರೆಂದು ತಿಳಿಸಿದರು.

    ಇದೇ ವೇಳೆ ಸಿಡಬ್ಲ್ಯುಎಂಎ ಆದೇಶದ ಬಳಿಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಸರ್ಕಾರವು ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ತಾಂತ್ರಿಕ ಸಮಿತಿಯು 3,000 ಕ್ಯೂಸೆಕ್ ನೀರು ಬಿಡುವಂತೆ ಶಿಫಾರಸು ಮಾಡಿದೆ. CWMA ನಿರ್ದೇಶನಗಳು ಏನೆಂದು ನಾವು ಕಾದು ನೋಡಬೇಕಾಗಿದೆ ಎಂದರು.

     ಇದೇ ವೇಳೆ ಕರ್ನಾಟಕ ಬಂದ್ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಂದ್ ನಡೆಸಲು ಅವಕಾಶವಿಲ್ಲ. ಆದರೂ, ರಾಜ್ಯ ಸರ್ಕಾರ ಜನರ ಪ್ರತಿಭಟನೆಯನ್ನು ತಡೆಯುವದಿಲ್ಲ. ನಾಗರಿಕರಿಗೆ ರಕ್ಷಣೆ ನೀಡಲು ಸರಕಾರ ಬದ್ಧವಾಗಿದೆ. ಬಂದ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ವಿಧಿಸಿರುವ ನಿಯಮಗಳನ್ನು ಸಾರ್ವಜನಿಕರು ಅನುಸರಿಸಬೇಕು. ಬಂದ್‌ಗೆ ಕರೆ ನೀಡದೆ ಕೂಡ ಪ್ರತಿಭಟನೆ ನಡೆಸಬಹುದು ಎಂದು ಹೇಳಿದರು.

     ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ವಿಡಿಯೋ ಕಾನ್ಫರೆನ್ಸ್ ಬದಲಿಗೆ, ದೆಹಲಿಗೆ ತೆರಳಿ ಸಿಡಬ್ಲ್ಯುಎಂಎ ಸಭೆಯಲ್ಲಿ ಪಾಲ್ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ‘ತಮಿಳುನಾಡು 11,000 ಕ್ಯೂಸೆಕ್ ನೀರು ಕೇಳಿದೆ. ನಮ್ಮ ಅಧಿಕಾರಿಗಳು ಕರ್ನಾಟಕದ ವಾಸ್ತವಿಕ ಸ್ಥಿತಿ ತಿಳಿಸಿ, ಪರಿಣಾಮಕಾರಿಯಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದಲ್ಲಿ ಮಳೆ ಕೊರತೆಯಿದ್ದು, ಅನಾವೃಷ್ಠಿ ಸೇರಿ ವಾಸ್ತವಿಕ ಪರಿಸ್ಥಿತಿಗಳನ್ನು ಅಧಿಕಾರಿಗಳು ಸಭೆಯಲ್ಲಿ ವಿವರಿಸಲಿದ್ದಾರೆ. ಪ್ರಸ್ತುತ ತಮಿಳುನಾಡಿಗೆ 2000 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ ಎಂದು ತಿಳಿಸಿದ್ದಾರೆ.

     ಸೆಪ್ಟೆಂಬರ್ 26 ರಂದು ಆದೇಶ ನೀಡಿದ್ದ ಸಿಡಬ್ಲ್ಯೂಆರ್‌ಸಿ, ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 15 ರವರೆಗೆ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap