ಹೈದರಾಬಾದ್:
ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ, ಆಕ್ಷೇಪಾರ್ಹ ಮತ್ತು ಅಸಭ್ಯ ಹೇಳಿಕೆ ನೀಡಿದ್ದಕ್ಕಾಗಿ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಮುಖ್ಯಸ್ಥ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಕೇಂದ್ರ ಚುನಾವಣಾ ಆಯೋಗ(ಇಸಿಐ) ನೋಟಿಸ್ ಜಾರಿ ಮಾಡಿದೆ.
ಮಂಗಳವಾರ ರಾತ್ರಿ ನೀಡಲಾದ ನೋಟಿಸ್‌ನ ಪ್ರಕಾರ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ”ಲಟ್ಖೋರ್” ಮತ್ತು ”ಚವಾಟಾ ದಡ್ಡಮಾಸ್” ಮತ್ತು ನಿಷ್ಪ್ರಯೋಜಕ ಫೆಲೋಗಳು ಎಂದು ಕರೆದ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗ ಚಂದ್ರಶೇಖರ್ ರಾವ್ ಅವರಿಗೆ ಸೂಚಿಸಿದೆ.
ಏಪ್ರಿಲ್ 18, 2024 ರಂದು ಬೆಳಗ್ಗೆ 11 ಗಂಟೆಯೊಳಗೆ ಕಾಂಗ್ರೆಸ್ ವಿರುದ್ಧ “ಅಶ್ಲೀಲ”, “ಅವಹೇಳನಕಾರಿ” ಮತ್ತು “ಆಕ್ಷೇಪಾರ್ಹ” ಹೇಳಿಕೆಯ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗ, ತೆಲಂಗಾಣ ಮಾಜಿ ಸಿಎಂಗೆ ಸೂಚಿಸಿದೆ.
ಕೆಸಿಆರ್ ಅವರು ನೋಟಿಸ್ ಗೆ ನಿಗದಿತ ಸಮಯದೊಳಗೆ ಪ್ರತಿಕ್ರಿಯೆ ಸಲ್ಲಿಸದಿದ್ದರೆ ಯಾವುದೇ ಹೆಚ್ಚಿನ ಉಲ್ಲೇಖವನ್ನು ನೀಡದೆ ಈ ವಿಷಯದಲ್ಲಿ ಸೂಕ್ತ ಕ್ರಮ ಅಥವಾ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಏಪ್ರಿಲ್ 5, 2024 ರಂದು ಸಿರ್ಸಿಲ್ಲಾದಲ್ಲಿ ಕೆಸಿಆರ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಅಸಭ್ಯ, ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಜಿ ನಿರಂಜನ್ ಅವರು ಏಪ್ರಿಲ್ 6, 2024 ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.