ಕೇದಾರನಾಥದಲ್ಲಿ ‘ಹಿಂದೂಯೇತರಿಗೆ ಪ್ರವೇಶ ನಿಷೇಧಿಸಿ

ಡೆಹ್ರಾಡೂನ್‌: 

     ಹಿಂದೂಯೇತರ ಜನರು ಕೇದಾರನಾಥ (Kedarnath row) ಧಾಮದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ. ಹೀಗಾಗಿ ಅನ್ಯ ಧರ್ಮದವರಿಗೆ ಪ್ರವೇಶ ನಿಷೇಧಿಸಬೇಕು ಎಂದು ಬಿಜೆಪಿ ಶಾಸಕಿ ಆಶಾ ನೌಟಿಯಾಲ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕೇದಾರನಾಥ ಶಾಸಕಿಯಾಗಿರುವ ಆಶಾ ನೌಟಿಯಾಲ್ ಹಿಂದೂಯೇತರ ವ್ಯಕ್ತಿಗಳು ಧಾರ್ಮಿಕ ಸ್ಥಳದ ಪಾವಿತ್ರ್ಯಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

   ಕೇದಾರನಾಥದಲ್ಲಿ ಚಾರ್ ಧಾಮ್ ‘ಯಾತ್ರೆ’ ನಿರ್ವಹಣೆ ಕುರಿತು ಸಭೆ ನಡೆಸಿದ ಅವರು ಜನರ ಅಹವಾಲನ್ನು ಸ್ವೀಕರಿಸಿದರು. ಜನರು ಎತ್ತಿರುವ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ ಮತ್ತು ಕೇದಾರನಾಥ ಧಾಮದ ಪ್ರತಿಷ್ಠೆಗೆ ಕಳಂಕ ತರುವ ಕೆಲವು ಜನರು ಇದ್ದಾರೆ ಎಂದು ನೌಟಿಯಾಲ್ ಹೇಳಿದರು.

    ಅಂತಹ ಜನರು ದೇವಾಲಯದ ಆವರಣ ಪ್ರವೇಶಿಸುವುದನ್ನು ನಿಷೇಧಿಸಬೇಕೆಂದು ಅವರು ಒತ್ತಾಯಿಸಿದರು. ಕೇದಾರನಾಥದಲ್ಲಿ ಯಾತ್ರೆ ನಿರ್ವಹಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಭೆ ನಡೆಸಲಾಯಿತು.ಕೇದಾರನಾಥ ಧಾಮದ ಪ್ರತಿಷ್ಠೆಗೆ ಕಳಂಕ ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅಂತಹ ಜನರ ಪ್ರವೇಶವನ್ನು ನಿಷೇಧಿಸಬೇಕು” ಎಂದು ಆಶಾ ನೌಟಿಯಾಲ್ ಭಾನುವಾರ ಮಾಧ್ಯಮದವರಿಗೆ ತಿಳಿಸಿದರು. 

    ಕೇದಾರನಾಥ ಧಾಮದದಲ್ಲಿ ಕೆಲವು ವ್ಯಕ್ತಿಗಳು ಮಾಂಸ, ಮೀನು ಮತ್ತು ಮದ್ಯವನ್ನು ಬಡಿಸುತ್ತಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸರಿಯಾದ ತನಿಖೆಯ ನಂತರವೇ ಇದನ್ನು ಕಂಡುಹಿಡಿಯಬಹುದು ಎಂದು ಅವರು ಹೇಳಿದ್ದಾರೆ. ಈ ವಿಷಯದ ಕುರಿತು ಇತ್ತೀಚೆಗೆ ಉಸ್ತುವಾರಿ ಸಚಿವ ಸೌರಭ್ ಬಹುಗುಣ ಅವರು ಸ್ಥಳೀಯ ಅಧಿಕಾರಿಗಳು ಮತ್ತು ನಿವಾಸಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ನೌಟಿಯಾಲ್ ಉಲ್ಲೇಖಿಸಿದ್ದಾರೆ.

   ನೌಟಿಯಾಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, “ಸಂವೇದನಾಶೀಲ ಹೇಳಿಕೆಗಳನ್ನು ನೀಡುವುದು ಬಿಜೆಪಿ ನಾಯಕರ ಅಭ್ಯಾಸ. ಉತ್ತರಾಖಂಡ ‘ದೇವಭೂಮಿ. ನೀವು ಅದನ್ನು ಧರ್ಮದೊಂದಿಗೆ ಯಾಕೆ ಜೋಡಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. 

   ಚಾರ್ ಧಾಮ್ ಯಾತ್ರೆಯು ಏಪ್ರಿಲ್ 30 ಅಕ್ಷಯ ತೃತೀಯದಂದು ಪ್ರಾರಂಭವಾಗಲಿದ್ದು, ಅಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ಬಾಗಿಲು ತೆರೆಯಲಾಗುತ್ತದೆ. ಕೇದಾರನಾಥ ಧಾಮದ ದ್ವಾರಗಳು ಮೇ 2 ರಂದು ಮತ್ತು ಬದರಿನಾಥ ಧಾಮದ ದ್ವಾರಗಳು ಮೇ 4 ರಂದು ತೆರೆಯಲ್ಪಡುತ್ತವೆ.