ನವದೆಹಲಿ:
ಈ ವರ್ಷದ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜ ಹಾರಿಸುವುದನ್ನು ತಡೆಯಲು ಬಹುಮಾನ ನೀಡುವುದಾಗಿ ಘೋಷಿಸಿದ್ದಕ್ಕಾಗಿ ಅಮೆರಿಕ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸ ಪ್ರಕರಣ ದಾಖಲಿಸಿದೆ. ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜ ಹಾರಿಸುವುದನ್ನು ತಡೆದವರಿಗೆ 11 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಪನ್ನುನ್ ಹಾಗೂ ಸಿಖ್ಸ್ ಫಾರ್ ಜಸ್ಟೀಸ್ ಹೇಳಿತ್ತು.
NIA ಯ FIR ಪ್ರಕಾರ, ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (SFJ) ಸಂಘಟನೆಯ ಜನರಲ್ ಕೌನ್ಸೆಲ್ ಆಗಿರುವ ಪನ್ನುನ್, ಆಗಸ್ಟ್ 10 ರಂದು ಪಾಕಿಸ್ತಾನದ ಲಾಹೋರ್ ಪ್ರೆಸ್ ಕ್ಲಬ್‌ನಲ್ಲಿ ನಡೆದ “ಮೀಟ್ ದಿ ಪ್ರೆಸ್” ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ್ದ. ವಾಷಿಂಗ್ಟನ್‌ನಿಂದ ವೀಡಿಯೊ ಭಾಷಣದಲ್ಲಿ, ಪ್ರಧಾನಿ ಮೋದಿ ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ತಡೆಯುವ “ಸಿಖ್ ಸೈನಿಕರಿಗೆ” 11 ಕೋಟಿ ರೂ. ಬಹುಮಾನ ನೀಡುವುದಾಗಿ ಆತ ಹೇಳಿದ್ದ.
ಪನ್ನುನ್ ತನ್ನ ಭಾಷಣದಲ್ಲಿ, ಭಾರತದ ವಿರುದ್ಧ ವಿಷ ಕಾರಿದ್ದ. ಪಂಜಾಬ್, ದೆಹಲಿ, ಹರಿಯಾಣ ಮತ್ತು ಹಿಮಾಚಲ ಪ್ರದೇಶವನ್ನು ಒಳಗೊಂಡಿರುವ ಖಲಿಸ್ತಾನ್ ಎಂದು ಕರೆಯಲ್ಪಡುವ ನಕ್ಷೆಯನ್ನು ಆತ ಹಂಚಿಕೊಂಡಿದ್ದ. ಭಾರತದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಯನ್ನು ಅಡ್ಡಿಪಡಿಸುವ ಮತ್ತು ಭಾರತದ ವಿರುದ್ಧ ಸಿಖ್ಖರಲ್ಲಿ ಅಸಮಾಧಾನವನ್ನು ಹರಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಎನ್‌ಐಎ ಪ್ರಕರಣ ದಾಖಲಿಸಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಕ್ರಿಮಿನಲ್ ಪಿತೂರಿ) ಸೆಕ್ಷನ್ 61(2) ಮತ್ತು 1967 ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 10 ಮತ್ತು 13 ರ ಅಡಿಯಲ್ಲಿ ಇತ್ತೀಚೆಗೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ “ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತು ಇತರ ಅಪರಿಚಿತ ವ್ಯಕ್ತಿಗಳನ್ನು” ಹೆಸರಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಅಪರಾಧದ ಗಂಭೀರತೆ, ಅದರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಣಾಮಗಳು ಮತ್ತು ದೊಡ್ಡ ಪಿತೂರಿಯನ್ನು ಬಯಲು ಮಾಡುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವುದು ಅಗತ್ಯವಾಗಿದೆ” ಎಂದು ಗೃಹ ಸಚಿವಾಲಯ ಹೇಳಿದೆ.
