ಹೈದರಾಬಾದ್:
ತೆಲಂಗಾಣ ಸರ್ಕಾರವು ಆದಾಯದ ಕೊರತೆಯನ್ನು ಎದುರಿಸುತ್ತಿದೆ. ಸರ್ಕಾರದ ಬಳಿ ಸಂಬಳ ಕೊಡುವುದಕ್ಕೂ ಹಣ ಇಲ್ಲ. ನಮ್ಮ ಸರ್ಕಾರ ಸಾಲದ ಹೊರೆ ಮತ್ತು ಇತರ ಕಾರಣಗಳಿಂದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆರ್‌ಬಿಐಯಿಂದ 4 ಸಾವಿರ ಕೋಟಿ ರೂ. ಕೈ ಸಾಲ ಪಡೆದಿದ್ದೇವೆ ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದರು. ಇದೀಗ ತೆಲಂಗಾಣದ ವಿರೋಧ ಪಕ್ಷ ಭಾರತ ರಾಷ್ಟ್ರ ಸಮಿತಿಯು ಮುಖ್ಯಮಂತ್ರಿ ರೇವಂತ್ ರೆಡ್ಡಿ ಆದಾಯ ಕೊರತೆ ಹೇಳಿಕೆ ಬಗ್ಗೆ ಟೀಕಿಸಿದ್ದು, ಸೌಂದರ್ಯ ಸ್ಪರ್ಧೆಗೆ 200 ಕೋಟಿ ರೂ. ಖರ್ಚು ಮಾಡಿದ್ದನ್ನು ಪ್ರಶ್ನಿಸಿದೆ. ಮಂಗಳವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ವಾರ್ಷಿಕ ಬಜೆಟ್ ಓದುತ್ತಿದ್ದಂತೆ ವಿರೋಧ ಪಕ್ಷದ ಶಾಸಕರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲದೆ ಇದ್ದರೂ ಸೌಂದರ್ಯ ಸ್ಪರ್ಧೆಗೆ 200 ಕೋಟಿ ರೂ. ಮೀಸಲಿಟ್ಟಿದೆ. ಇದರ ಬದಲಿಗೆ ಸಂತ್ರಸ್ತ ರೈತರಿಗೆ ಎಕರೆಗೆ 25,000 ರೂ.ಗಳನ್ನು ನೀಡುವಂತೆ ವಿಪಕ್ಷಗಳು ಒತ್ತಾಯಿಸಿದ್ದಾವೆ. 72ನೇ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸುವ ಯೋಜನೆಗಳನ್ನು ಬಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಕೂಡ ಟೀಕಿಸಿದರು. ಆಡಳಿತಾರೂಢ ಕಾಂಗ್ರೆಸ್ “ಕೋಟಿಗಟ್ಟಲೆ ಸಾರ್ವಜನಿಕ ಹಣವನ್ನು” ಖರ್ಚು ಮಾಡುವುದರ ಹಿಂದಿನ “ವಿಕೃತ ತರ್ಕ”ವನ್ನು ಅವರು ಟೀಕಿಸಿದರು. ಜೊತೆಗೆ 46 ಕೋಟಿ ರೂ. ಫಾರ್ಮುಲಾ-ಇ ರೇಸ್ ಹಗರಣದಲ್ಲಿ ನಡೆದ ಅಕ್ರಮಗಳ ಬಗ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್‌ನಲ್ಲಿ ಫಾರ್ಮುಲಾ-ಇ ರೇಸ್‌ಗಾಗಿ 46 ಕೋಟಿ ರೂಪಾಯಿ ಖರ್ಚು ಮಾಡುವುದು ತಪ್ಪು. ಇದೀಗ ರೈತರಿಗೆ ಬಡವರಿಗೆ ನೀಡಲು ಸರ್ಕಾರದ ಬಳಿ ಹಣವಿಲ್ಲ ಆದರೆ ಮಿಸ್ ವರ್ಲ್ಡ್, ಸೌಂದರ್ಯ ಸ್ಪರ್ಧೆಯನ್ನು ನಡೆಸಲು 200 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಖರ್ಚು ಮಾಡಲು ಇವರ ಬಳಿ ಅನುದಾನವಿದೆ. ಇದರ ಬಗ್ಗೆ ದಯವಿಟ್ಟು ತಿಳಿಸಿ ಎಂದು ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಕೆ.ಟಿ. ರಾಮರಾವ್ ಕೇಳಿದ್ದಾರೆ.
ತೆಲಂಗಾಣದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ನಾವು ನಂಬಬೇಕೆಂದು ಕಾಂಗ್ರೆಸ್ ಸರ್ಕಾರ ಬಯಸುತ್ತಿದೆ. ಆದರೆ ಇಲ್ಲಿ 71000 ಕೋಟಿ ರೂ. ಕೊರತೆ ಇದೆ ಎಂದು ಮುಖ್ಯ ಮಂತ್ರಿಯವರೇ ಒಪ್ಪಿಕೊಂಡಿದ್ದಾರೆ. ಹೀಗಾದರೆ ತೆಲಂಗಾಣದ ಅಭಿವೃದ್ದಿ ಯಾವಾಗ ಎಂದು ಅವರು ಪ್ರಶ್ನೆ ಮಾಡಿದ್ದಾರೆ. 2023 ರ ಚುನಾವಣೆಗೆ ಮುನ್ನ ನೀಡಲಾದ ಉಚಿತ ಕೊಡುಗೆಗಳನ್ನು ಪೂರೈಸಲು ಕಾಂಗ್ರೆಸ್ ತೆಲಂಗಾಣದ ಹಣಕಾಸನ್ನು ಖಾಲಿ ಮಾಡಿದೆ ಎಂದು ಕೆಟಿಆರ್ ಆರೋಪಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ವಿಧಾನ ಪರಿಷತ್‌ನಲ್ಲಿ ಮಾತನಾಡಿ, ರಾಜ್ಯ ನೌಕರರಿಗೆ ಪ್ರತೀ ತಿಂಗಳ ಆರಂಭದಲ್ಲಿ ವೇತನ ನೀಡಲು ಕಷ್ಟವಾಗುತ್ತಿದೆ. ನೌಕರರ ತುಟ್ಟಿ ಭತ್ಯೆ (ಡಿಎ) ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಒತ್ತಾಯಿಸಬೇಡಿ. ಮುಂದೆ ಸರ್ಕಾರದ ಹಣಕಾಸು ಪರಿಸ್ಥಿತಿಯ ಸಂಪೂರ್ಣ ವಿವರವನ್ನು ನೀಡುತ್ತೇನೆ. ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ತಮ್ಮ ಕೆಲಸಗಳನ್ನು ಸೇವೆಯಂತೆ ಮಾಡಬೇಕು. ನೌಕರರು ದಯವಿಟ್ಟು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದರು.
