ರೋಮ್:
ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನಾ ಇಟಲಿಯಲ್ಲಿ ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ನಾಳೆ ಇಟಲಿಗೆ ತೆರಳುತ್ತಿದ್ದಾರೆ. ಈ ಮಧ್ಯೆ ಖಲಿಸ್ತಾನಿ ಪ್ರತ್ಯೇಕತವಾದಿಗಳಿಂದ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಸಲಾಗಿದೆ. ಈ ಘಟನೆಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಘಟನೆಗೆ ಕಾರಣವಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಟಲಿಗೆ ಹೇಳಿದೆ.
ಘಟನೆ ಖಂಡಿಸಿರುವ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಘಟನೆ ಕುರಿತು ಇಟಲಿಯ ವಿದೇಶಾಂಗ ಇಲಾಖೆಗೆ ತಿಳಿಸಲಾಗಿದೆ. ಘಟನೆಗೆ ಕಾರಣರಾದವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಇಟಲಿ ಘಟನೆ ಕುರಿತು ಪ್ರತಿಕ್ರಿಯಿಸಿರುವ ಇಟಲಿಯ ಭಾರತದ ರಾಯಭಾರಿ ವಾಣಿ ರಾವ್, ದಕ್ಷಿಣ ಇಟಲಿಯಲ್ಲಿರುವ ಬ್ರಿಂಡಿಸಿಯಲ್ಲಿ ಈ ಘಟನೆ ನಡೆದಿದೆ. ಇಟಲಿಯ ಸ್ಥಳೀಯ ಅಧಿಕಾರಿಗಳು ಪ್ರತಿಮೆ ಇದ್ದ ಜಾಗವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸ್ಥಳೀಯ ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ವಿದೇಶಗಳಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣ ಇದೇ ಮೊದಲೇನಲ್ಲಾ. ಕಳೆದ ವರ್ಷ ಮಾರ್ಚ್ ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸೈಮನ್ ಫ್ರೇಸರ್ ವಿಶ್ವವಿದ್ಯಾಲಯದ ಬರ್ನಾಬಿ ಕ್ಯಾಂಪಸ್‌ನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಕೆನಡಾದಲ್ಲಿ ನಡೆದ ಎರಡನೇ ಘಟನೆ ಇದಾಗಿತ್ತು.
ಮೊದಲ ಘಟನೆಯು ಒಂಟಾರಿಯೊ ಪ್ರಾಂತ್ಯದ ಹ್ಯಾಮಿಲ್ಟನ್ ಪಟ್ಟಣದ ಸಿಟಿ ಹಾಲ್ ಬಳಿ ನಡೆದಿತ್ತು. ಜುಲೈ 2022 ರಲ್ಲಿ ಕೆನಡಾದ ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರದೇಶದಲ್ಲಿನ ವಿಷ್ಣು ಮಂದಿರದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಜನವರಿ 2021 ರಲ್ಲಿ ಯುಎಸ್ ಕ್ಯಾಲಿಫೋರ್ನಿಯಾದ ಡೇವಿಸ್‌ನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.
