ನವದೆಹಲಿ:
ಇಂಡಿಯಾ ಒಕ್ಕೂಟವನ್ನು ಒಗ್ಗೂಡಿಸಿ ಬಿಜೆಪಿಯನ್ನು ಸೋಲಿಸುವ ಕಾರ್ಯತಂತ್ರದ ಭಾಗವಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಜ್ಞಾಪೂರ್ವಕವಾಗಿ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ವಿಶ್ವಾಸ ಕೊರತೆಯಿಂದಲ್ಲ. ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಶಕ್ತಿ ಹೊಂದಿರುವ ಇತರ ಪಕ್ಷಗಳಿಗೆ ಅವಕಾಶ ಮಾಡಿಕೊಟ್ಟು ಇಂಡಿಯೊ ಒಕ್ಕೂಟದ ಪಕ್ಷಗಳು ಹೆಚ್ಚಿನ ಸ್ಥಾನ ಗೆಲ್ಲಲು ನಾವು ಈ ತಂತ್ರವನ್ನು ಅನುಸರಿಸಿದೆವು ಎಂದರು.ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಒಂದು ಶಕ್ತಿಯಾಗಿದ್ದು ಅವರು ಸ್ಟಾರ್ ಪ್ರಚಾರಕರು, ಚುನಾವಣೆಯಲ್ಲಿ ಸ್ಪರ್ಧಿಸದಿರುವ ಅವರ ನಿರ್ಧಾರ ಸರಿಯಾಗಿದೆ ಎಂದರು.
ರಾಹುಲ್ ಗಾಂಧಿ ಅವರು ವಯನಾಡು ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರದಲ್ಲಿ ಗೆದ್ದರೆ ಯಾವ ಸ್ಥಾನವನ್ನು ತೊರೆಯಬೇಕು ಎಂಬುದು ಅವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.
ನಾವು ಕಡಿಮೆ ಸಂಖ್ಯೆಯ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಮೈತ್ರಿ ಪಾಲುದಾರರನ್ನು ಒಟ್ಟಿಗೆ ಇರಿಸಲು ಹೀಗೆ ಮಾಡಿದ್ದೇವೆ. ಇತರ ಸಮಾನ ಮನಸ್ಕ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಪ್ರತಿ ರಾಜ್ಯದಲ್ಲೂ ಸಮ್ಮಿಶ್ರ ರಚನೆಗೆ ಕಾಂಗ್ರೆಸ್ ಸಮಿತಿಯನ್ನು ರಚಿಸಿತು. ಪಕ್ಷದ ಹೈಕಮಾಂಡ್ ಈ ತಂತ್ರವನ್ನು ಅನುಮೋದಿಸಿದೆ. ನಾವು ಪ್ರತಿ ರಾಜ್ಯದಲ್ಲೂ ಸಮಾಲೋಚನೆ ನಡೆಸಿದ್ದೇವೆ ಎಂದರು.