ಬೆಂಗಳೂರು:
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ದೇಶದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದೇ ರೀತಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru airport) ಆಗಮಿಸುವ ಪ್ರಯಾಣಿಕರು ತಮ್ಮ ವಿಮಾನ ನಿರ್ಗಮನದ ಕನಿಷ್ಠ ಮೂರು ಗಂಟೆಗಳ ಮುನ್ನ ವಿಮಾನ ನಿಲ್ದಾಣಕ್ಕೆ ಬರಬೇಕು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮನವಿ ಮಾಡಿದೆ.
ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯನ್ನು ಹೆಚ್ಚಿಸಿದ ಕಾರಣ ಈ ಸೂಚನೆಯನ್ನು ನೀಡಲಾಗಿದೆ. ಮುಂದುವರಿದು ಪ್ರಯಾಣಿಕರು ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ ಸಂಪರ್ಕಿಸಬೇಕೆಂದು ವಿನಂತಿಸುತ್ತೇವೆ ಎಂದು ತಿಳಿಸಿದೆ.
ದೇಶಾದ್ಯಂತ ಘೋಷಿಸಲಾಗಿರುವ ಭದ್ರತಾ ಎಚ್ಚರಿಕೆಯ ಹಿನ್ನೆಲೆಯಲ್ಲಿ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಣೆಯನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕರು ತಮ್ಮ ವಿಮಾನ ನಿರ್ಗಮನದ ಕನಿಷ್ಠ ಮೂರು ಗಂಟೆಗಳ ಮುನ್ನ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೂಲಕ, ಚೆಕ್-ಇನ್, ಭದ್ರತಾ ತಪಾಸಣೆ ಮತ್ತು ಬೋರ್ಡಿಂಗ್ ಪ್ರಕ್ರಿಯೆಯನ್ನು ಸುಗಮವಾಗಿ ಕೈಗೊಳ್ಳಬಹುದು. ಪ್ರಯಾಣಿಕರು ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ ಸಂಪರ್ಕಿಸಬೇಕು ಎಂದು ಕೋರಲಾಗಿದೆ.
