ವಿಶ್ವದ ಚಿತ್ತ ಕಿಮ್‌ ಪುಟಿನ್‌ ಭೇಟಿಯತ್ತ……!

ನವದೆಹಲಿ:

     ಸರ್ವಾಧಿಕಾರಿ ಎಂದೇ ಕುಖ್ಯಾತಿ ಪಡೆದಿರುವ ಕಿಮ್ ಜಾಂಗ್ ಉನ್ ಭಾನುವಾರ ಮಧ್ಯಾಹ್ನ ಪ್ಯೊಂಗ್ಯಾಂಗ್‌ನಿಂದ ತಮ್ಮ ಖಾಸಗಿ ರೈಲಿನಲ್ಲಿ ರಷ್ಯಾಕ್ಕೆ ತೆರಳಿದರು ಎಂದು ಕೆಸಿಎನ್‌ಎ ಮಾಧ್ಯಮ ಮಂಗಳವಾರ ವರದಿ ಮಾಡಿದೆ. ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಅಪರೂಪದ ಶೃಂಗಸಭೆಗೆ ತೆರಳುತ್ತಿದ್ದಾರೆ ಎಂದು ಮಾಧ್ಯಮ ದೃಢಪಡಿಸಿದೆ.

    ಮಿಲಿಟರಿ ಸಿಬ್ಬಂದಿ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳು ಕಿಮ್ ಜೊತೆಗಿದ್ದರು ಎಂದು ಕೆಸಿಎನ್‌ಎ ತಿಳಿಸಿದೆ.ಮಾಧ್ಯಮವು ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ಮಿಲಿಟರಿ ಸಿಬ್ಬಂದಿ ಜೊತೆ ಕಪ್ಪು ಸೂಟ್‌ ಧರಿಸಿದ್ದ ಕಿಮ್ ಹಸಿರು ರೈಲು ಹತ್ತುತ್ತಿರುವಾಗ ಅವರ ಮೇಲೆ ಜನರು ಹೂಗಳನ್ನು ಚೆಲ್ಲುತ್ತಾ ಧ್ವಜಗಳನ್ನು ಬೀಸುತ್ತಿರುವುದು ಕಂಡುಬಂದಿದೆ. ಈ ರೈಲು ಶಸ್ತ್ರಸಜ್ಜಿತವಾಗಿದ್ದು, ಇತರ ವಿಶೇಷ ಉಪಕರಣಗಳನ್ನು ಹೊಂದಿದೆ ಎಂದು ನಂಬಲಾಗಿದೆ.

    ಕಿಮ್ ಅವರ ರಷ್ಯಾ ಪ್ರವಾಸ ಮತ್ತು ಪುಟಿನ್ ಜೊತೆಗಿನ ಭೇಟಿಯು ಪೂರ್ಣ ಪ್ರಮಾಣದ ಮಾತುಕತೆಯಾಗಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

     ಪೆಸ್ಕೋವ್ ಪ್ರಕಾರ, ಮಾತುಕತೆಗಳ ಮುಖ್ಯ ವಿಷಯವೆಂದರೆ ನೆರೆಯ ದೇಶಗಳ ನಡುವಿನ ಸಂಬಂಧಗಳ ವೃದ್ಧಿಯಾಗಿದೆ.’ನಾವು ನಮ್ಮ ಸ್ನೇಹವನ್ನು ಗಟ್ಟಿಗೊಳಿಸುವುದನ್ನು ಮುಂದುವರಿಸುತ್ತೇವೆ’ಎಂದು ಅವರು ಹೇಳಿದರು.

   ಖಂಡಾಂತರ ಕ್ಷಿಪಣಿಗಳನ್ನು ಪರೀಕ್ಷೆ ನಡೆಸುವ ಮೂಲಕ ಅಮೆರಿಕಕ್ಕೆ ಸೆಡ್ಡು ಹೊಡೆದಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಪುಟಿನ್ ಭೇಟಿ ಮಾಡುತ್ತಿರುವುದು ಇಡೀ ವಿಶ್ವದ ಗಮನವನ್ನು ಇತ್ತ ಸೆಳೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ