ಬೆಂಗಳೂರು:
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ. ಸಿ. ಮೋಹನ್ ಅಚ್ಚರಿ ರೀತಿಯಲ್ಲಿ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಆರಂಭದಲ್ಲಿ ಮುನ್ನಡೆಯಲ್ಲಿದ್ದ ಪಿ. ಸಿ. ಮೋಹನ್ ನಂತರ ಸುತ್ತಿನಲ್ಲಿ ಹಿನ್ನೆಡೆ ಅನುಭವಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಗೆದ್ದೆ ಗೆಲ್ಲುತ್ತಾರೆ ಎನ್ನಲಾಗುತಿತ್ತು.
ಅಂತಿಮ ಹಂತದಲ್ಲಿ ವಿಜಯಲಕ್ಷ್ಮಿ ಪಥ ಬದಲಾಯಿಸಿದ್ದು, ಮಹದೇವಪುರ, ಸಿ.ವಿ.ರಾಮನ್ ನಗರದಲ್ಲಿ ಪಿ.ಸಿ.ಮೋಹನ್ ಗೆ ಹೆಚ್ಚಿನ ಮತಗಳು ಸಿಕ್ಕಿದ್ದು 35 ರಿಂದ 40 ಸಾವಿರ ಲೀಡ್ ನಿಂದ ಗೆಲುವು ಸಾಧಿಸಿದ್ದಾರೆ.
ಒಂದೂವರೆ ದಶಕಗಳ ಇತಿಹಾಸ ಹೊಂದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ಆರಂಭದಿಂದಲೂ ಬಿಜೆಪಿಯೇ ಗೆಲುವು ಸಾಧಿಸುತ್ತಿದೆ. ಮಾತ್ರವಲ್ಲದೇ, ಒಬ್ಬರೇ ಸಂಸದರಾಗಿ ಮುಂದುವರೆದಿರುವುದು ವಿಶೇಷ.
2019 ರ ಲೋಕಸಭಾ ಚುನಾವಣೆಯಲ್ಲಿ ಪಿಸಿ ಮೋಹನ್ 70,968 ಮತಗಳ ಅಂತರದಿಂದ ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ವಿರುದ್ಧ ಗೆಲುವು ಸಾಧಿಸಿದ್ದರು. ಸದ್ಯ ಈ ಬಾರಿ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಮನ್ಸೂರ್ ಅಲಿ ಖಾನ್ ಸ್ಪರ್ಧಿಸಿದ್ದು ಪಿ.ಸಿ.ಮೋಹನ್ ಮತ್ತೊಮ್ಮೆ ಗೆದ್ದು 4ನೇ ಬಾರಿ ಸಂಸದರಾಗಿದ್ದಾರೆ.