ಮುಂಬೈ:
ಶಾರುಖ್ ಖಾನ್ ಅವರ ಮುಂದಿನ ಬಾಲಿವುಡ್ ಚಿತ್ರ ‘ಕಿಂಗ್’ ಸಿನಿಪ್ರಿಯರ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಶಾರುಖ್‌ಗ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದು ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ವಿಶೇಷ ಎಂದರೆ ಶಾರುಖ್-ದೀಪಿಕಾ ಜೋಡಿಯ 6ನೇ ಚಿತ್ರ ಇದಾಗಿದೆ. ಅಭಿಷೇಕ್ ಬಚ್ಚನ್, ಸುಹಾನಾ ಖಾನ್, ಅಭಯ್ ವರ್ಮಾ, ಅರ್ಷದ್ ವಾರ್ಸಿ, ಮತ್ತು ಜೈದೀಪ್ ಅಹ್ಲಾವತ್ ಅವರಂತಹ ಖ್ಯಾತ ನಟ-ನಟಿಯರು ಈ ಚಿತ್ರದಲ್ಲಿ ಇದ್ದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ʼಕಿಂಗ್ʼ ಚಿತ್ರದಲ್ಲಿ ನಟಿಸಲು ತಾನು ಎಷ್ಟು ಉತ್ಸುಕನಾಗಿದ್ದೇನೆ ಎಂದು ಶಾರುಖ್ ಖಾನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ಶಾರುಖ್ ಖಾನ್ ಹಾಗೂ ದೀಪಿಕಾ ಅವರ ಜೋಡಿಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ. ದೀಪಿಕಾ ಅವರ ಹಿಂದಿಯ ಮೊದಲ ಸಿನಿಮಾ ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ಶಾರುಖ್ಗೆ ನಾಯಕನಾಗಿದ್ದರು. ನಂತರ ‘ಚೆನ್ನೈ ಎಕ್ಸ್ಪ್ರೆಸ್’ ‘ಜವಾನ್’, ʼಹ್ಯಾಪಿ ನ್ಯೂ ಇಯರ್ʼ, ʼಪಠಾಣ್ʼ ಚಿತ್ರದಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ʼಕಿಂಗ್ʼ ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಫ್ಯಾನ್ಸ್ ಜತೆ ಶಾರುಖ್ ಮಾತುಕತೆ ನಡೆಸಿದ್ದಾರೆ.
‘ಆಸ್ಕ್ ಎಸ್‌ಆರ್‌ಕೆ’ (Ask SRK)ಯಲ್ಲಿ ಒಬ್ಬ ಅಭಿಮಾನಿ ‘ಕಿಂಗ್’ ಚಿತ್ರದ ಬಗ್ಗೆ ಪ್ರಸ್ತಾಪಿಸಿದ್ದಾರೆ. “ನಿಮ್ಮನ್ನು ಮತ್ತು ದೀಪಿಕಾ ಅವರನ್ನು ಮತ್ತೆ ಒಟ್ಟಿಗೆ ನೋಡಲು ತುಂಬಾ ಉತ್ಸುಕನಾಗಿದ್ದೇನೆ” ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್ ಖಾನ್, “ನಾನೂ ಕೂಡ ಬಹಳಷ್ಟು ಉತ್ಸುಕನಾಗಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ‘ಕಿಂಗ್ʼ ಚಿತ್ರವು ಶಾರುಖ್ ಖಾನ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದಾರೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಮತ್ತು ಬಹುನಿರೀಕ್ಷಿತ ‘ಕಲ್ಕಿ 2898 ಎಡಿ ಸೀಕ್ವೆಲ್’ನಂತಹ ಎರಡು ದೊಡ್ಡ ಪ್ರಾಜೆಕ್ಟ್ಗಳಿಂದ ದೂರ ಸರಿದ ನಂತರ ನಟಿ ದೀಪಿಕಾ ಪಡುಕೋಣೆ ʼಕಿಂಗ್ʼ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಹೈ ಆ್ಯಕ್ಷನ್ ಸಿಕ್ವೆನ್ಸ್ ಕಥೆ ಹೊಂದಿದ್ದ ಈ ಸಿನಿಮಾ 2026ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

 


