ಮುಂಬೈ
ಬಾಲಿವುಡ್ ನ ಕಿಂಗ್ ಎಂದೇ ಖ್ಯಾತರಾದ ಶಾರುಖ್ ಖಾನ್ ʼಜವಾನ್ʼ ಸಿನಿಮಾದ ಅಪ್ಡೇಟ್ ಗಾಗಿ ಕಾಯುತ್ತಿರುವಾಗಲೇ ಶೂಟಿಂಗ್ ವೊಂದರಲ್ಲಿ ಅವರಿಗೆ ಪೆಟ್ಟು ಬಿದ್ದಿರುವ ಕುರಿತು ವರದಿಯಾಗಿದೆ.
ಇತ್ತೀಚೆಗಷ್ಟೇ ಅಟ್ಲಿ ನಿರ್ದೇಶನದ ʼಜವಾನ್ʼ ಚಿತ್ರದ ಟ್ರೇಲರ್ ರಿಲೀಸ್ ಬಗ್ಗೆ ಅಪ್ಡೇಟ್ ವೊಂದು ಹೊರಬಿದ್ದಿತ್ತು.
ಟಾಮ್ ಕ್ರೂಸ್ ಅವರ ಹಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾದಲ್ಲಿ ಒಂದಾಗಿರುವ ʼಮಿಷನ್ ಇಂಪಾಸಿಬಲ್ 7ʼ ಸಿನಿಮಾದ ಮಧ್ಯಂತರದಲ್ಲಿ ʼಜವಾನ್ʼ ಸಿನಿಮಾದ ಮೊದಲ ಟ್ರೈಲರ್ ಥಿಯೇಟರ್ ನಲ್ಲೇ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಹಾಟ್ ಟಾಪಿಕ್ ಆಗಿರುವಾಗಲೇ ನಟ ಶಾರುಖ್ ಅವರಿಗೆ ಶೂಟಿಂಗ್ ಸೆಟ್ ನಲ್ಲಿ ಏಟಾಗಿದೆ ಎನ್ನುವ ಸುದ್ದಿ ಫ್ಯಾನ್ಸ್ ಗಳಿಗೆ ಶಾಕ್ ನೀಡಿದೆ.
ವರದಿಯ ಪ್ರಕಾರ ಲಾಸ್ ಏಂಜಲೀಸ್‌ನಲ್ಲಿ ಬಹಿರಂಗವಾಗದಿರುವ ಪ್ರಾಜೆಕ್ಟ್ ವೊಂದರ ಶೂಟಿಂಗ್ ನಲ್ಲಿರುವಾಗ ಅವರ ಮೂಗಿಗೆ ಏಟಾಗಿ ರಕ್ತ ಸುರಿದಿದೆ. ಕೂಡಲೇ ಚಿತ್ರತಂಡ ಅವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ರಕ್ತ ನಿಲ್ಲಲು ಶಸ್ತ್ರಚಿಕಿತ್ಸೆಯನ್ನು ಮಾಡಿ, ಯಾವುದೇ ಹೆದರುವ ಅವಶ್ಯಕತೆಯಿಲ್ಲ ಎಂದು ಬ್ಯಾಂಡೇಜ್ ವೊಂದನ್ನು ಮೂಗಿಗೆ ಸುತ್ತಿ ಕಳುಹಿಸಿದ್ದಾರೆ. ಸದ್ಯ ಶಾರುಖ್ ಅಲ್ಲಿಂದ ವಾಪಾಸ್ ಆಗಿದ್ದು, ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ʼಪಠಾಣ್ʼ ನಿಂದ ವಿನ್ನಿಂಗ್ ಟ್ರ್ಯಾಕ್ ಗೆ ಮರಳಿರುವ ಕಿಂಗ್ ಖಾನ್ ʼಜವಾನ್ʼ ಬಳಿಕ ರಾಜ್‌ಕುಮಾರ್ ಹಿರಾನಿಯವರ ʼಡಂಕಿʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.