ಕೃಷಿಯೊಂದಿಗೆ ಹೈನುಗಾರಿಕೆ ರೈತನಿಗೆ ವರ

ಕೊಡಿಗೇನಹಳ್ಳಿ  : 

     ಭೀಕರ ಬರದಲ್ಲಿ ಉಪ ಕಸುಬಾಗಿ ಹೈನುಗಾರಿಕೆ ರೈತರಿಗೆ ಇಂದು ವರವಾಗಿದೆ. ಅಧಿಕಾರಿಗಳಿಗೆ ರಜೆ ಇರುತ್ತದೆ. ಆದರೆ ರೈತ ವರ್ಷದ ಮುನ್ನೂರ ಅರವತ್ತೈದು ದಿನ ಕಷ್ಟಪಟ್ಟರೂ ವ್ಯವಸಾಯ ಲಾಭದಾಯಕವಾಗಿಲ್ಲ. ಕೃಷಿ ಜೊತೆಯಲ್ಲಿ ಹೈನುಗಾರಿಕೆ ರೈತನಿಗೆ ವರವಾಗಿದೆ ಎಂದು ತುಮಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

     ಕೊಡಿಗೇನಹಳ್ಳಿ ಹೋಬಳಿ ಮಟ್ಟದಲ್ಲಿ ತುಮಕೂರು ಹಾಲು ಒಕ್ಕೂಟ ಮಹಾ ಮಂಡಳಿ ಹಾಗೂ ಪಶು ವೈದ್ಯಕೀಯ ಇಲಾಖೆ ಮಧುಗಿರಿ ಹಾಗೂ ಹೋಬಳಿ ಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ದೇವರತೋಪು ಆವರಣದಲ್ಲಿ ಆಯೋಜಿಸಿದ್ದ ಮಿಶ್ರತಳಿಯ ಕರುಗಳ ಪ್ರದರ್ಶನದಲ್ಲಿ ಅವರು ಮಾತನಾಡಿದರು.

     ಕರುಗಳ ಆರೈಕೆಯಿಂದ ಉತ್ತಮ ಗುಣ ಮಟ್ಟದ ಹಸುಗಳನ್ನು ಪಡೆಯಬಹುದು. ಮಧುಗಿರಿ, ಕೊರಟಗೆರೆ, ಪಾವಗಡ ಈ ತಾಲ್ಲೂಕುಗಳಿಗೆ ಯಾವುದೇ ಶಾಶ್ವತ ನೀರಾವರಿ ಯೋಜನೆ, ನೀರಾವರಿಯ ಆಶ್ರಯ ಇಲ್ಲದೆ ಈ ಭಾಗದ ರೈತರು ಅನೇಕ ಕಷ್ಟಗಳನ್ನು ಪಡಬೇಕಾಗಿದೆ. ಅಧಿಕಾರಿಗಳಿಗೆ ನಿಗದಿತವಾದ ರಜೆ ಮತ್ತು ಅನೇಕ ಸೌಲಭ್ಯಗಳು ದೊರೆಯುತ್ತವೆ. ಆದರೆ ರೈತ ದಿನದ ಇಪ್ಪತ್ನಾಲ್ಕು ಗಂಟೆ ದುಡಿದರೂ ತಾನು ತನ್ನ ಕುಟುಂಬವನ್ನು ಸಾಕಲರದಾಗಿದೆ. ನಾನು ಸಹ ರೈತ ಕುಟುಂಬದವನಾಗಿದ್ದು, ವ್ಯವಸಾಯದ ಕಷ್ಟದ ಅನುಭವ ಇದೆ. ಇಂದು ವ್ಯವಸಾಯ ಲಾಭದಾಯಕವಲ್ಲದಾಗಿದೆ. ಕಷ್ಟಗಳ ನಡುವೆ ದೇಶಕ್ಕೆ ಅನ್ನ ನೀಡುತ್ತಿರುವುದು ರೈತ. ಉಪ ಕಸುಬಾಗಿರುವ ಹೈನುಗಾರಿಕೆಯು ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದೆ. ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ವಿಮೆ ಮಾಡಿಸಿ ಎಂದು ತಿಳಿಸಿದರು.

     ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳ ರೈತರಿಗೆ ಹೈನುಗಾರಿಕೆ ಒಂದು ವರವಾಗಿದ್ದು, ಈ ಭಾಗದಲ್ಲಿ ಯಾವುದೆ ಶಾಶ್ವ್ವತ ನೀರಾವರಿ ಯೋಜನೆಗಳು ಇಲ್ಲದೆ ಇರುವುದರಿಂದ ತಮ್ಮ ಒಕ್ಕೂಟದಿಂದ ಮತ್ತು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೀಡಿ ರೈತನ ಕೈ ಬಲಪಡಿಸಬೇಕು. ಒಕ್ಕೂಟವು ಹಾಲು ಉತ್ಪಾದಕರಿಗೆ ಪ್ರೋತ್ಸ್ಸಾಹ ನೀಡಬೇಕು ಎಂದು ನಿರ್ದೇಶಕರಲ್ಲಿ ಮನವಿ ಮಾಡಿಕೊಂಡರು.

     ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಹಾಗೆ ಕರುಗಳ ಆರೈಕೆ ಅತಿ ಮುಖ್ಯ. ಹುಟ್ಟಿದ ತಕ್ಷಣ ಕರುಗಳಿಗೆ ಗಿಣ್ಣು ಹಾಲು ಕುಡಿಸಬೇಕು. ಇದರಿಂದ ಕರುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹುಟ್ಟಿದ ಎರಡು ತಿಂಗಳು ಕರುವಿಗೆ ಅಗತ್ಯವಾದ ಹಾಲು ಉಣಿಸಿದಾಗ ಕರು ಮುಂದೆ ಉತ್ತಮ ಗುಣ ಮಟ್ಟದ ಹಸುವಾಗಿ ಬೆಳೆಯುತ್ತದೆ. ಕರು ಮತ್ತು ಹಸುಗಳಿಗೆ ಖನಿಜ ಮಿಶ್ರಣ ಪಶು ಆಹಾರವನ್ನು ನೀಡಿ, ಕಾಲ ಕಾಲಕ್ಕೆ ಜಂತು ಹುಳು ನಿವಾರಕ ಮಾತ್ರೆ ಮತ್ತು ಟಾನಿಕ್ ನೀಡಿ. ಸರ್ಕಾರ ನಿರ್ದೇಶಿಸುವ ಲಸಿಕೆಗಳನ್ನು ಹಾಕಿಸಿ ಎಂದು ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುಬ್ಬರಾಯಭಟ್ ರೈತರಿಗೆ ತಿಳಿಸಿದರು.

      ಈ ಮಿಶ್ರತಳಿ ಕರುಗಳ ಪ್ರದರ್ಶನದಿಂದ ರೈತರಿಗೆ ಕರುಗಳ ಆರೈಕೆಯ ಬಗ್ಗೆ ತಮ್ಮ ಸಹ ರೈತರಿಂದ ಮಾಹಿತಿ ಪಡೆಯಲು ಸಹಕಾರಿಯಾಗುತ್ತದೆ. ತಮ್ಮ ಕರುಗಳನ್ನು ಸಹ ಉತ್ತಮವಾಗಿ ಬೆಳೆಸಲು ಮಾರ್ಗದರ್ಶನ ಪಡೆಯ ಬಹುದಾಗಿದೆ. ಪ್ರತಿ ರೈತರು ಹುಟ್ಟಿದ ತಕ್ಷಣ ಕರುವಿಗೆ ಗಿಣ್ಣು ಹಾಲು ಕುಡಿಸಿ, ಕರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ನರಸಿಂಹನ್ ತಿಳಿಸಿದರು.

      ಮಿಶ್ರತಳಿ ಪ್ರದರ್ಶನಕ್ಕೆ 183 ಕರುಗಳು ಬಂದಿದ್ದು, ಕರುಗಳನ್ನು ಉತ್ತಮ ಆರೈಕೆಗೆ ಪ್ರೋತ್ಸಾಹ ನೀಡಲು, ಹುಟ್ಟಿನಿಂದ 3 ತಿಂಗಳು, 3 ರಿಂದ 6 ತಿಂಗಳು, 6 ರಿಂದ ಒಂದು ವರ್ಷದ ಕರುಗಳಿಗೆ ಮೊದಲ, ಎರಡನೆ, ಮೂರನೆ ಬಹುಮಾನಗಳನ್ನು ನೀಡಲಿದ್ದು, ಪ್ರದರ್ಶನಕ್ಕೆ ಬಂದಿರುವ ಎಲ್ಲಾ ಕರುಗಳ ಸಾಕಾಣಿಕೆದಾರರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಮಧುಗಿರಿ ಪಶು ಇಲಾಖೆÉಯ ಸಹಾಯಕ ನಿರ್ದೇಶಕ ಡಾ. ಗಿರೀಶ್‍ಬಾಬು ರೆಡ್ಡಿ ತಿಳಿಸಿದರು.

     ಕಾರ್ಯಕ್ರಮದಲ್ಲಿ ಡಾ. ರಾಜು, ಡಾ. ವೀರಣ್ಣ, ಕೊಡಿಗೇನಹಳ್ಳಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಉಮಾಶಂಕರ ರೆಡ್ಡಿ, ಕಡಗತ್ತೂರು ಹಾ.ಉ.ಸ. ಸಂಘದ ಅಧ್ಯಕ್ಷ ಶನಿವಾರಮರೆಡ್ಡಿ, ವೆಂಕಟಪ್ಪ, ತಾ.ಪಂ ಸದಸ್ಯ ಕೆ.ಸಿ ನರಸಾರೆಡ್ಡಿ, ಹೋಬಳಿಯ ಪಶು ವೈದ್ಯಾಧಿಕಾರಿಗಳು, ಹಾ.ಉ.ಸ.ಸಹಕಾರ ಸಂಘ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ರೈತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap