ಕೊಡಿಗೇನಹಳ್ಳಿ :

ಕಳೆದ ಬುಧವಾರ ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಮಳೆಗೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ಕೊಂಡವಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ರಂಗನಹಳ್ಳಿಯ ರೈತ ನಾಗಭೂಷಣ್ ರವರು ಬೆಳೆದಿದ್ದ ಸುಮಾರು 3 ರಿಂದ 4 ಸಾವಿರ ಬಾಳೆ ಗಿಡಗಳು ನೆಲಕ್ಕುರುಳಿವೆ. ಇವರು ಕೊರೋನಾ ಸೋಂಕಿಗೆ ಈಡಾಗಿ ಈಗಾಗಲೆ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿ, ಕನಿಷ್ಠ ಬಾಳೆ ಎಲೆಯನ್ನೂ ಮಾರದಂತಹ ದುಸ್ಥಿತಿ ಎದುರಾಗಿದ್ದು, ಬಾಳೆಗೊನೆಗಳು ಸಂಪೂರ್ಣ ನಾಶವಾಗಿವೆ ಎಂದು ಪ್ರಗತಿಯೊಂದಿಗೆ ತಮ್ಮ ನೋವು ತೋಡಿಕೊಂಡಿದ್ದಾರೆ.
ಕೊಡಿಗೇನಹಳ್ಳಿ ಹೋಬಳಿ, ಕೊಂಡವಾಡಿ ಗ್ರಾಮ ಪಂಚಾಯಿತಿಯ ರಂಗನಹಳ್ಳಿ ಗ್ರಾಮದ ನಾಗಭೂಷಣ್ ಬಿನ್ ಯಲ್ಲಪ್ಪರವರ ಸರ್ವೆ ನಂ: 181 ರಲ್ಲಿ 1 ಎಕರೆ 15 ಗುಂಟೆ, 172/3 0.39 ಗುಂಟೆ, 182/2 0.38 ಗುಂಟೆ, 175/2 0.38 ಗುಂಟೆ ಒಟ್ಟು 4 ಎಕರೆ 10 ಗುಂಟೆಯಲ್ಲಿ ಬೆಳೆದಿದ್ದ ಬಾಳೆ ಬೆಳೆಗೆ ಭೀಕರ ಬಿರುಗಾಳಿ ಮಳೆಯಿಂದಾಗಿ ಹಾನಿಯಾಗಿದೆ.
ರೈತ ನಾಗಭೂಷಣ್ ಮಾತನಾಡಿ, ಬಾಳೆ ಬೆಳೆಯಲು ಸುಮಾರು 2 ಲಕ್ಷ ರೂ. ಸಾಲ ಮಾಡಿದ್ದೇನೆ. ಇನ್ನೇನು ಫಸಲು ಕೈಗೆ ಸಿಗುತ್ತಿದೆ ಎನ್ನುವ ಹೊತ್ತಲ್ಲಿ ನನ್ನ ಪಾಡು ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಾಂತಾಗಿದೆ. ಹಾಗಾಗಿ ಆರ್ಥಿಕವಾಗಿ ತತ್ತರಿಸಿರುವ ನನ್ನ ಕಷ್ಟಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸರ್ಕಾರ ಊರುಗೋಲಾಗಲಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








