ಗುಬ್ಬಿ
ಮೂರು ದಿನಗಳ ಹಿಂದೆ ಸೀಲ್‍ಡೌನ್ ಮಾಡಿದ ಗ್ರಾಮಕ್ಕೆ ಯಾವ ಅಧಿಕಾರಿಗಳೂ ಬಾರದೇ ಸುಮಾರು 75 ಗ್ರಾಮಸ್ಥರು ಮೂಲಭೂತ ಸವಲತ್ತಿಗೆ ಪರದಾಡುವ ದುಸ್ಥಿತಿ ತಂದ ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನ ಬಿಜೆಪಿ ಸರ್ಕಾರದ ಕಾರ್ಯಕ್ಕೆ ಹಿಡಿದ ಕನ್ನಡಿ ಎಂದು ಕಾಂಗ್ರೆಸ್ ಮುಖಂಡ ವಸಂತ್‍ಕುಮಾರ್ ಟೀಕಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚೆಂಗಾವಿ ಗ್ರಾಮ ಪಂಚಾಯಿತಿಯ ದೊಳ್ಳೇನಹಳ್ಳಿ ಪಾಳ್ಯ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಒಂದು ಕೋವಿಡ್ ಪಾಸಿಟಿವ್ ಪ್ರಕರಣ ಬಂದಿದೆ ಎಂದು ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಿದ ಅಧಿಕಾರಿಗಳು ಮತ್ತೆ ಇತ್ತ ಕಡೆ ಸುಳಿದಿಲ್ಲ. ಇಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳು ನಿತ್ಯ ಕೂಲಿ ನಂಬಿ ಬದುಕು ಸಾಗಿಸುತ್ತಿವೆ
ಇವರಿಗೆ ಮೂಲಭೂತ ವ್ಯವಸ್ಥೆ ಮಾಡದ ತಾಲ್ಲೂಕು ಆಡಳಿತ ಬುಧವಾರ ಬೆಳಗ್ಗೆಯಿಂದ ಕಾದರೂ ಯಾವ ಅಧಿಕಾರಿಗಳು ಇಲ್ಲಿ ಬಂದಿಲ್ಲ ಎಂದು ಕಿಡಿ ಕಾರಿದರು.ಕೊರೋನಾ ಪಾಸಿಟಿವ್ ಪ್ರಕರಣದಲ್ಲಿ ಸಾವನ್ನಪ್ಪಿದ ಎನ್ನಲಾದ ವ್ಯಕ್ತಿಯು, ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರುವ ಬಗ್ಗೆ ತುಮಕೂರಿನ ಆಸ್ಪತ್ರೆ ಖಚಿತ ಪಡಿಸಿ ಶವವನ್ನು ಕಳುಹಿಸಿಕೊಟ್ಟಿದ್ದರು. ಗ್ರಾಮಸ್ಥರು ಶವ ಸಂಸ್ಕಾರ ಮುಗಿಸಿದ ಬಳಿಕ ಆಗಮಿಸಿದ ಅಧಿಕಾರಿಗಳು ಸಂಶಯವಿದೆ ಎಂದು ಮನೆಯ ಉಳಿದ ಐವರನ್ನು ಕ್ವಾರಂಟೈನ್ ಮಾಡಿದರು. ಜತೆಗೆ 24 ಮಂದಿಯನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಎಲ್ಲರಿಗೂ ನೆಗೆಟೀವ್ ಫಲಿತಾಂಶ ಬಂದರೂ ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಿರುವುದು ವಿಷಾದನೀಯ ಎಂದರು.
ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಸಾವನ್ನಪ್ಪಿದ ವ್ಯಕ್ತಿಯ ಪಾಸಿಟಿವ್ ರಿಪೋರ್ಟ್ ಮೊದಲು ತೋರಿಸಲಿ. ನಂತರ ಆಸ್ಪತೆಯಲ್ಲಿ ನೀಡಿದ ನೆಗೆಟೀವ್ ದಾಖಲೆ ನಾನು ಒದಗಿಸುತ್ತೇನೆ. ದುರುದ್ದೇಶದಲ್ಲಿ ಪೂರ್ತಿ ಗ್ರಾಮದ 75 ಮನೆಗಳನ್ನು ಸೀಲ್ ಮಾಡುವ ಮುನ್ನ ಸರ್ಕಾರದ ನಿಯಮ ತಿಳಿಸಬೇಕು. ಪ್ರಕರಣ ದೃಢವಾದ ಮನೆ ಹಾಗೂ ಬೀದಿ ಮಾತ್ರ ಸೀಲ್ ಮಾಡಬೇಕಿದೆ. ಆದರೆ ಕೂಲಿ ಕಾರ್ಮಿಕರಿರುವ ಇಡೀ ಗ್ರಾಮವನ್ನೇ ಸ್ಥಗಿತಗೊಳಿಸುವ ಜತೆಗೆ ಪ್ರಮುಖ ಮೂರು ರಸ್ತೆಗಳನ್ನು ಮುಚ್ಚಿರುವುದು ಅಧಿಕಾರಿಗಳ ದುರುದ್ದೇಶ ತೋರುತ್ತಿದೆ. ಸೀಲ್‍ಡೌನ್ ಭಾಗಕ್ಕೆ ಹಾಲು ತರಕಾರಿ ಕೂಡ ನೀಡುತ್ತಿಲ್ಲ. ಜತೆಗೆ ಹೈನುಗಾರಿಕೆ ಮಾಡುವ ಇಲ್ಲಿನ ಜನರ ಬಳಿ ಹಾಲು ಖರೀದಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಅಧಿಕಾರಿಗಳು ಬಂದು ಸಮಜಾಯಿಷಿ ನೀಡುವಂತೆ ಆಗ್ರಹಿಸಿದರು.
ಒಂದು ಕಿ.ಮೀ. ದೂರದ ಗ್ರಾಮ ಪಂಚಾಯಿತಿಯಿಂದ ಯಾವ ಸಿಬ್ಬಂದಿಯೂ ಮೂರು ದಿನದಿಂದ ಇಲ್ಲಿಗೆ ಬಂದಿಲ್ಲ. ಪ್ರತಿಭಟನೆಗೆ ಮುಂದಾದ ಸೀಲ್‍ಡೌನ್ ಪ್ರದೇಶಕ್ಕೆ ಆಗಮಿಸಿ ಜನರ ಕಷ್ಟ ವಿಚಾರಿಸದ ಅಧಿಕಾರಿ ಕಚೇರಿಯಲ್ಲೇ ಕೂತು ಕಾಲ ಕಳೆದಿದ್ದಾರೆ. ಕಂದಾಯ ಅಧಿಕಾರಿಗಳು ಇತ್ತ ಬಂದಿಲ್ಲ. ಈ ಬಗ್ಗೆ ತಹಸೀಲ್ದಾರ್ ಅವರಿಗೆ ಮಾಹಿತಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು. ನಂತರ ಸಂಜೆ ಹೊತ್ತಿಗೆ ಆಗಮಿಸಿದ ಅಧಿಕಾರಿಗಳ ಹಿಂಡು ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
