ನವದೆಹಲಿ:
ಕೋಲ್ಕತಾದ ವೈದ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನಲೆಯಲ್ಲಿ ನಡೆದ ವೈದ್ಯರ ಮುಷ್ಕರದಿಂದಾಗಿ ಈವರೆಗೂ 23 ಮಂದಿ ಸಾವಿಗೀಡಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸೋಮವಾರ ಮಾಹಿತಿ ನೀಡಿದೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಪುನಾರಂಭಿಸಿದ್ದು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.
ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ಕೋಲ್ಕತಾದ ವೈದ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ಪುನಾರಂಭಗೊಂಡಿದ್ದು, ಈ ವೇಳೆ ಬಂಗಾಳ ಸರ್ಕಾರದ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ರಾಜ್ಯ ಆರೋಗ್ಯ ಇಲಾಖೆ ಸಲ್ಲಿಸಿದ ಸ್ಥಿತಿಗತಿ ವರದಿಯನ್ನು ಪೀಠದ ಮುಂದೆ ಸಲ್ಲಿಸಿದರು. ಇದರಲ್ಲಿ ವೈದ್ಯರು ಮುಷ್ಕರ ನಡೆಸುತ್ತಿರುವ ಕಾರಣ 23 ಜನರು ಸಾವನ್ನಪ್ಪಿದ್ದಾರೆ ಎಂದು ತಮ್ಮ ವಾದ ಮಂಡಿಸಿದ್ದಾರೆ.
ಈ ಹಿಂದಿನ ವಿಚಾರಣೆಯಲ್ಲಿ ಅಂದರೆ ಆಗಸ್ಟ್ 22 ರ ಕಲಾಪದ ವೇಳೆ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಮಹಿಳಾ ವೈದ್ಯೆಯ ಅಸಹಜ ಸಾವನ್ನು ದಾಖಲಿಸುವಲ್ಲಿ ವಿಳಂಬವಾದ ಬಗ್ಗೆ ಸುಪ್ರೀಂ ಕೋರ್ಟ್ ಕೋಲ್ಕತ್ತಾ ಪೊಲೀಸರನ್ನು ಮತ್ತು ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಲ್ಲದೆ ಇದು “ಅತ್ಯಂತ ಗೊಂದಲ” ಎಂದು ಕರೆದಿತ್ತು ಮತ್ತು ಘಟನೆಗಳ ಅನುಕ್ರಮವನ್ನು ಪ್ರಶ್ನಿಸಿತ್ತು. ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ ಅನ್ನು ರೂಪಿಸಲು ಉನ್ನತ ನ್ಯಾಯಾಲಯವು ಈ ಹಿಂದೆ 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ಅನ್ನು ಕೂಡ ರಚಿಸಿತ್ತು.
ಘಟನೆಯನ್ನು “ಭಯಾನಕ” ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಸಾವಿರಾರು ಪ್ರತಿಭಟನಾಕಾರರಿಗೆ ಸಾರ್ವಜನಿಕ ಆಸ್ತಿ ಮತ್ತು ಸೌಲಭ್ಯವನ್ನು ಧ್ವಂಸ ಮಾಡಲು ಅವಕಾಶ ನೀಡಿದ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.