ಕೊರಟಗೆರೆ :
ಹುಟ್ಟಿದಾಗ ಅಣ್ಣ ತಮ್ಮಂದಿರು, ಬೆಳೀತಾ ದಾಯಾದಿಗಳು ಎಂಬ ಹಿರಿಯರ ನಾಣ್ಣುಡಿಯಂತೆ, ಒಂದೇ ತಾಯಿಯ ಇಬ್ಬರು ಮಕ್ಕಳು ಜಮೀನಿಗಾಗಿ ಹೊಡೆದಾಡಿಕೊಂಡು, ಅಣ್ಣ ಹಾಗೂ ಅಣ್ಣನ ಮಗ ಸೇರಿ, ತಮ್ಮನ ಕೈ ಕಾಲು ಹಾಗೂ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲ್ಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಜಮೀನಿನ ವಿಭಾಗಕ್ಕೆ ಸಂಬಂಧಿಸಿದಂತೆ ಒಂದೇ ತಾಯಿಯ ಇಬ್ಬರು ಮಕ್ಕಳು ಮಚ್ಚು ಮತ್ತು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಅದೃಷ್ಟವಶಾತ್ ತಮ್ಮನು
ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಚಿಕ್ಕರಾಮಯ್ಯ ಎಂಬ ಅಣ್ಣನು ತನ್ನ ಮಗ ಬಸವರಾಜು ಎಂಬುವನ ಜೊತೆ ಸೇರಿ, ತನ್ನ ಸ್ವಂತ ತಮ್ಮನಾದ ಕಾಂತರಾಜು ಎಂಬುವವರಿಗೆ ಜಮೀನಿನ ಗಲಾಟೆ ಸಂದರ್ಭದಲ್ಲಿ ಮಚ್ಚಿನಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಜಮೀನಿನ ವಿಭಾಗಕ್ಕೆ ಸಂಬಂಧಿಸಿದಂತೆ ಕೆಲವೊಂದು ತಕರಾರುಗಳು ತಲೆದೋರಿ ಜಮೀನು ವಿಭಾಗ ಸಮರ್ಪಕವಾಗಿ ನಡೆದಿಲ್ಲ ಎಂದು ಮನಸ್ತಾಪ ಉಂಟಾಗಿ, ಜಮೀನಿನ ಗಲಾಟೆಯಿಂದ ಅಣ್ಣ-ತಮ್ಮಂದಿರ ನಡುವೆ ದೊಡ್ಡದಾಗಿ ಕಂದಕ ಉಂಟಾಗಿ, ಮಚ್ಚು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಕಾಂತರಾಜು ಎಂಬುವರಿಗೆ ಎರಡೂ ಕೈಗಳು, ಕಾಲು ಹಾಗೂ ಕುತ್ತಿಗೆ ಭಾಗಕ್ಕೆ ಹೆಚ್ಚಿನ ಗಾಯವಾಗಿ ಬೆಂಗಳೂರಿನ ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್‍ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ