ಇನ್ಫೋಸಿಸ್ ಸೇವೆ ಎಲ್ಲಾ ವಲಯಗಳಿಗೆ ವಿಸ್ತರಿಸಿದೆ

 ಕೊರಟಗೆರೆ : 

      ಇನ್ಫೋಸಿಸ್ ಫೌಂಡೇಷನ್‍ನ ಅಧ್ಯಕ್ಷೆ ಸುಧಾಮೂರ್ತಿರವರ ಸೇವೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಆರೋಗ್ಯ ಸೇರಿದಂತೆ ಎಲ್ಲಾ ವಲಯಗಳಲ್ಲು ಇದ್ದು, ರಾಮಕೃಷ್ಣ ಆಶ್ರಮ ಇದಕ್ಕೆಲ್ಲ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

      ಅವರು ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇನ್ಫೋಸಿಸ್ ಫೌಂಡೇಷನ್ ಪ್ರಾಯೋಜಕತ್ವ ಹಾಗೂ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಸಹಯೋಗದಿಂದ ನಡೆದ ದೂರತರಂಗ ಶಿಕ್ಷಣ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವು ಹಲವರಿಗೆ ಜೀವನದ ಅಡಿಪಾಯವನ್ನೇ ಭದ್ರ ಮಾಡಿದೆ. ಉನ್ನತ ಶಿಕ್ಷಣವು ಗ್ರಾಮೀಣ ಭಾಗದಲ್ಲಿರುವ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದಲ್ಲಿ ಅತಿ ಎತ್ತರಕ್ಕೆ ಕೊಂಡೊಯ್ಯುತ್ತದೆ. ಸ್ವಾತಂತ್ರ್ಯ ಪೂರ್ವ ಶೇ. 12 ಇದ್ದ ಸಾಕ್ಷರತಾ ಪ್ರಮಾಣವು ಇಂದು ಶೇ. 72 ಕ್ಕೆ ತಲುಪಿದೆ. ಇದು ಶಿಕ್ಷಣದಲ್ಲಾದ ಮಹತ್ತರ ಬದಲಾವಣೆ. ಈ ಬದಲಾವಣೆಯಿಂದ ದೇಶವು ವಿದ್ಯಾವಂತರನ್ನು ತಯಾರಿಸುವ ಕಾರ್ಖಾನೆಯಂತಾಗಿದೆ. ಈ ಬೆಳವಣಿಗೆಯಿಂದ ನಮ್ಮ ದೇಶದ ತಂತ್ರಜ್ಞಾನ ಪಡೆದ ವಿದ್ಯಾವಂತರು ಪ್ರಪಂಚದಲ್ಲಿಯೇ ಎಲ್ಲಾ ದೇಶದಲ್ಲಿಯು ಮುಂಚೂಣಿಯಲ್ಲಿದ್ದಾರೆ ಎಂದರು.

       ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಅತ್ಯುನ್ನತ ಪದವಿ ಪಡೆದವರು, ಜ್ಞಾನವಂತರು ಗ್ರಾಮೀಣ ಭಾಗದ ಬಡತನದಿಂದ ಬಂದಂತಹ ವಿದ್ಯಾರ್ಥಿಗಳಾಗಿದ್ದಾರೆ. ಅಂತಹ ಗ್ರಾಮೀಣ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಈ ಜಗತ್ತಿನಲ್ಲಿ ಮೂಲಭೂತ, ತಂತ್ರಜ್ಞಾನ ಸೌಕರ್ಯ ಮತ್ತು ಆರ್ಥಿಕ ಕೊರತೆಯಿಂದ ಕಲಿಕೆಯಲ್ಲಿ ಹಿಂದುಳಿಯದೆ ಮುಂದೆ ಬರುವ ಉದ್ದೇಶದಿಂದ ಇನ್ಫೋಸಿಸ್ ಫೌಂಡೇಷನ್‍ನ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿರವರ ಉದಾರ ಸೇವೆಯಿಂದ ಇಂತಹ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲು 20 ದೂರತರಂಗ ಶಿಕ್ಷಣವನ್ನ ಪ್ರಾರಂಭಿಕ ಹಂತದಲ್ಲಿಪ್ರಾರಂಭಿಸುತ್ತಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಡಾ.ಜಿ.ಪರಮೇಶ್ವರರವರೊಂದಿಗೆ ಪ್ರಾರಂಭಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.

      ಕಾರ್ಯಕ್ರಮದಲ್ಲಿ ಡಿಡಿಪಿಐ ರೇವಣ್ಣಸಿದ್ದಪ್ಪ, ಬಿಇಒ ಸುಧಾಕರ್, ತಾಪಂ ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯ ಈರಣ್ಣ, ಗ್ರಾಪಂ ಅಧ್ಯಕ್ಷ ರಾಮಕೃಷ್ಣ, ಮಾಜಿ ತೆಂಗು ನಾರು ನಿಗಮ ಅಧ್ಯಕ್ಷ ವೆಂಕಟಾಚಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ವ್‍ನಾರಾಯಣ್, ಅರಕೆರೆ ಶಂಕರ್, ಮುಖ್ಯಶಿಕ್ಷಕರಾದ ರಾಮಕೃಷ್ಣಪ್ಪ, ಎಲ್.ಕಾಮಯ್ಯ, ಬಸವರಾಜು, ವಕೀರ್ ಖಾನ್, ಇನ್ಫೋಸಿಸ್ ಮಹೇಶ್, ಶ್ರೀಹರಿ, ವಿನಯ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link