ಕೊರಟಗೆರೆ :
ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸಾರ್ವಜನಿಕರ ಮತ್ತು ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸದಿರುವ ಕಾರಣಕ್ಕಾಗಿ, ಸಾಮಾನ್ಯ ಸಭೆ ಕೋರಂ ಇಲ್ಲದೆ ಮುಂದೂಡಲ್ಪಟ್ಟ ಘಟನೆ ಜೆಟ್ಟಿಅಗ್ರಹಾರ ಪಂಚಾಯತಿಯಲ್ಲಿ ನಡೆದಿದೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಜೆಟ್ಟಿಅಗ್ರಹಾರ ಗ್ರಾಮ ಪಂಚಾಯತಿಯಲ್ಲಿ ಒಟ್ಟು 18 ಸದಸ್ಯರಿದ್ದು, ಮಂಗಳವಾರ ಗ್ರಾಪಂ ಕಛೇರಿಯ ಸಭಾಂಗಣದಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರನ್ನೊಳಗೊಂಡು ಒಟ್ಟು 11 ಮಂದಿ ಸಭೆಗೆ ಗೈರು ಹಾಜರಾಗಿದ್ದಾರೆ.
ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಂಜುಳ ಸಾರ್ವಜನಿಕರ ಸಮಸ್ಯೆಗಳಿಗೆ ಹಾಗೂ ಸದಸ್ಯರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ನೊಂದಿದ್ದು, ಸದಸ್ಯರು ಅವರ ಆಡಳಿತ ವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿ ಗೈರು ಹಾಜರಾಗಿದ್ದಾರೆ. ಪಂಚಾಯತಿ ಕಾರ್ಯಾಲಯದಲ್ಲಿ ಸಿ.ಸಿ ಟಿವಿ ಇಲ್ಲದ ಕಾರಣ ಪಿಡಿಓ ಸೇರಿದಂತೆ ಕೆಲವು ಸಿಬ್ಬಂದಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳಿಗೆ ಸದಸ್ಯರುಗಳು ಬೇಸತ್ತು ಸಾಮಾನ್ಯ ಸಭೆ ಬಹಿಷ್ಕರಿಸಿದ್ದಾರೆ. ಇದು ಹೀಗೆಯೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ಪಂಚಾಯತಿ ಮುಂದೆ ಧರಣಿ ಕೂರಲಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷೆ ಸಿದ್ದಗಂಗಮ್ಮ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ