ತುಮಕೂರು ಎಸಿಬಿ ಬಲೆಗೆ ಬಿದ್ದ ತೀತಾ ಬೆಸ್ಕಾಂ ಶಾಖಾಧಿಕಾರಿ!!

 ಕೊರಟಗೆರೆ :

 ಬೆಸ್ಕಾಂ ಕಚೇರಿಯಲ್ಲಿ ಶಾಖಾಧಿಕಾರಿಯ ವಿಚಾರಣೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳ ತಂಡ.

     ಕೊರೋನಾ ರೋಗದ ಲಾಕ್‍ಡೌನ್ ಹೊಡೆತಕ್ಕೆ ರೈತರು ಬೆಳೆದಿರುವ ಬೆಳೆಗಳಿಗೆ ಮಾರುಕಟ್ಟೆ ಸೌಲಭ್ಯವಿಲ್ಲದೆ ಬೆಳೆಗಳು ಸಂಪೂರ್ಣ ಭೂಮಿಯ ಪಾಲಾಗಿವೆ. ಆದರೆ ಇಲ್ಲೋರ್ವ ಬೆಸ್ಕಾಂ ಶಾಖಾಧಿಕಾರಿ ರೈತನ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು, ಟಿಸಿ ರಿಪೇರಿಗಾಗಿ 10 ಸಾವಿರ ರೂ. ಲಂಚ ಪಡೆಯುವಾಗ ತುಮಕೂರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.

ಕೊರಟಗೆರೆ ತಾಲ್ಲೂಕು ತೀತಾ ಬೆಸ್ಕಾಂ ಶಾಖಾಧಿಕಾರಿ ಮಹಮ್ಮದ್ ರಫಿ ಎಂಬಾತ ಕೆಂಗಯ್ಯನಪಾಳ್ಯದ ರೈತ ರಾಘವೇಂದ್ರ ಎಂಬುವರಿಂದ ಕೊರಟಗೆರೆ ಬೆಸ್ಕಾಂ ಕಚೇರಿ ಆವರಣದಲ್ಲಿ 10 ಸಾವಿರ ರೂ. ಲಂಚ ಪಡೆಯುವಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ಇಲಾಖೆಯ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ಮತ್ತು ಇನ್‍ಸ್ಪೆಕ್ಟರ್ ವಿಜಯಲಕ್ಷ್ಮೀ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಆರೋಪಿ ಮತ್ತು 10 ಸಾವಿರ ಲಂಚದ ಹಣದ ಸಮೇತ ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ಕೆಂಗಯ್ಯನಪಾಳ್ಯದ ರೈತ ರಾಘವೇಂದ್ರ ಮಾತನಾಡಿ, ತೀತಾ ಬೆಸ್ಕಾಂ ಶಾಖಾಧಿಕಾರಿ ಮಹಮ್ಮದ್ ರಫಿಗೆ ಕಳೆದ ಆರು ತಿಂಗಳ ಹಿಂದೆ ವಿದ್ಯುತ್ ಕಂಬ ಮತ್ತು ಟಿಸಿಗೆ ಈಗಾಗಲೇ 1 ಲಕ್ಷ 50 ಸಾವಿರ ಹಣ ನೀಡಿ ವಿದ್ಯುತ್ ಸಂಪರ್ಕ ಪಡೆದಿದ್ದೇನೆ. ಈಗ ನಮ್ಮ ಟಿಸಿ ಸುಟ್ಟು ಹೋಗಿದೆ. ರಿಪೇರಿಗೆ ಮನವಿ ಮಾಡಿದರೆ ಮತ್ತೆ 10 ಸಾವಿರ ಲಂಚದ ಬೇಡಿಕೆ ಇಟ್ಟರು. ಅದಕ್ಕಾಗಿ ಸ್ನೇಹಿತರ ಸಹಾಯದಿಂದ ತುಮಕೂರು ಎಸಿಬಿ ಕಚೇರಿಗೆ ದೂರು ನೀಡಿ ಹಿಡಿಸಿದ್ದೇನೆ ಎಂದು ಹೇಳಿದರು.

ತುಮಕೂರು ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ಮಾತನಾಡಿ, ಕೆಂಗಯ್ಯನಪಾಳ್ಯದ ರೈತ ರಾಘವೇಂದ್ರ ಲಂಚದ ಬೇಡಿಕೆ ಇಡುತ್ತಿರುವ ಅಧಿಕಾರಿಯ ವಿರುದ್ದ ತುಮಕೂರು ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ರೈತನ ದೂರಿನ ಅನ್ವಯ ಎಸಿಬಿ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿದೆ. ಕೊರಟಗೆರೆ ಬೆಸ್ಕಾಂ ಕಚೇರಿ ಆವರಣದಲ್ಲಿ ರೈತನಿಂದ 10 ಸಾವಿರ ಲಂಚ ಪಡೆಯುವಾಗ ತೀತಾ ಶಾಖಾಧಿಕಾರಿ ಮಹಮ್ಮದ್ ರಫಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

 ಅಧಿಕಾರಿ ಮತ್ತು ರೈತನ ಆಡೀಯೊ ಸಂಭಾಷಣೆ..

ರೈತ:- ತುಂಬ ಕಷ್ಟದಲ್ಲಿ ಇದ್ದೀನಿ ಸಾರ್ 10ಸಾವಿರ ಆಕ್ತೀನಿ..

ಅಧಿಕಾರಿ:- 10ಸಾವಿರ ಸಾಕಾಗುತ್ತಾ ರಘು..

ರೈತ:- ಸೋಮವಾರ ಕೋಡ್ಲ ಸಾರ್..

ಅಧಿಕಾರಿ:- ನನ್ನ 8553442492 ಮೊಬೈಲ್ ನಂಬರಿಗೆ ಗೋಗಲ್ ಪೇ ಮಾಡು.

ಅಧಿಕಾರಿ:-ಎಲ್ಲಿದ್ದೀಯಾ ರಘು,

ರೈತ:- 10ಗಂಟೆಗೆ ಬೆಸ್ಕಾಂ ಕಚೇರಿ ಬಳಿ ಬರ್ತಿನಿ..

ಅಧಿಕಾರಿ:- ಬೇಡ ಬೀಡು ಬರಬೇಡ,

ರೈತ:- ಇಲ್ಲ ಸಾರ್ ಈಗ ಬರ್ತೀದಿನಿ ಸರಿಯಾಗಿ 10ಗಂಟೆಗೆ ಬರ್ತೀನಿ..

ಅಧಿಕಾರಿ:- ಮೂರು ದಿನದಿಂದ ನನಗೆ ಕಥೆ ಹೇಳಿ ಚಾಕಲೇಟ್ ನೀಡ್ತಿದೀಯಾ..

ರೈತ:- 10ಗಂಟೆಗೆ ಬಂದು ನಿಮ್ಮ ಹಣ ಕೋಡ್ತೀನಿ ಸಾರ್ ಎಂಬ ಅಧಿಕಾರಿ ಮತ್ತು ರೈತನ ನಡುವಿನ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link