ಕೊರಟಗೆರೆ :
ಕೊರೋನಾ 2ನೇ ಅಲೆ ತೀವ್ರತೆ ಹೆಚ್ಚುತಿರುವ ಹಿನ್ನೆಲೆಯಲ್ಲಿ ರೋಗಿಗಳ ಮನೆ ಬಾಗಿಲಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ, ಔಷಧಿ ಕಿಟ್‍ಗಳನ್ನು ಹಂಚಿಕೆ ಮಾಡುವುದಲ್ಲದೆ, ಅವರಿಗೆ ರೋಗ ಹರಡದಂತೆ ಅರಿವು ಮೂಡಿಸುವುದರ ಜೊತೆಗೆ ಆತ್ಮಸ್ಥ್ಯೆರ್ಯ ತುಂಬುವಂತ ಕೆಲಸ ಮಾಡಬೇಕು ಎಂದು ಮಧುಗಿರಿ ಉಪ ವಿಭಾಗಾಧಿಕಾರಿ ಕೆ. ಸೋಮಪ್ಪ ತಿಳಿಸಿದರು.
ಅವರು ಸೋಮವಾರ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಕೊರೋನಾ ಹೆಲ್ತ್ ಸೆಂಟರ್, ಹೆಲ್ತ್‍ಕೇರ್, ಕೊರೋನಾ ಪರೀಕ್ಷಾ ಕೇಂದ್ರ, ಲಸಿಕಾ ಕೇಂದ್ರ ಸೇರಿದಂತೆ ಆ್ಯಕ್ಸಿಜನ್ ಪೂರೈಕಾ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು. ವೈದ್ಯಾಧಿಕಾರಿ ಡಾ.ಪ್ರಕಾಶ್‍ರವರಿಂದ ಮಾಹಿತಿ ಪಡೆದು, ಯಾವುದೇ ಕೊರತೆ ಹಾಗೂ ಸಮಸ್ಯೆ ಇದ್ದರೆ ತಕ್ಷಣ ಮಾಹಿತಿ ನೀಡಿ, ಯಾವುದೇ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಧುಗಿರಿ ವಿಭಾಗ ವ್ಯಾಪ್ತಿಯಲ್ಲಿ ಕೋವಿಡ್ ಇಳಿಕೆಯಾಗಿದೆ. ಸಾವಿನ ಸಂಖ್ಯೆ ಸಹ ಕಡಿಮೆಯಾಗಿದೆ. ಕೊರೋನಾ ಸೋಂಕಿತರು , ಹೋಂಐಸೋಲೇಶನ್‍ನಲ್ಲಿರುವವರು ಜನ ಸಂಪರ್ಕಕ್ಕೆ ಬಾರದೆ, ಎಚ್ಚರಿಕೆ ವಹಿಸಿ ಸೋಂಕು ಹರಡದಂತೆ ನಿಗಾ ವಹಿಸಬೇಕು. ಕೋವಿಡ್ ಸೆಂಟರ್‍ಗೆ ಸೋಂಕಿತರು ಬರಲು ಹೆದರುತ್ತಿದ್ದು, ರೋಗಿಗಳು ಯಾವುದೇ ಭಯವಿಲ್ಲದೆ ಬರುವಂತಾಗ ಬೇಕು. ಜೊತೆಗೆ ಕಂದಾಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ವೃತ್ತ ನಿರೀಕ್ಷಕರು ಸೋಂಕಿತರಿಗೆ ಮೆಡಿಕಲ್ ಕಿಟ್‍ನ್ನು ಸಂಬಂಧಪಟ್ಟ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆ ಯರ ಜೊತೆಗೂಡಿ ಸಮರೋಪಾದಿಯಲ್ಲಿ ಹಂಚಿಕೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಗೋವಿಂದರಾಜುರವರು ಮಾತನಾಡಿ, ತಾಲ್ಲೂಕಿನಲ್ಲಿ ಟಾಸ್ಕ್‍ಫೋರ್ಸ್ ಸಭೆ ನಡೆಸಿ ನೋಡಲ್ ಅಧಿಕಾರಿಗಳಿಗೆ ಕೋರೋನಾ ಸೋಂಕು ತಡೆಗೆ ಶ್ರಮಿಸುವಂತೆ ಸೂಚಿಸಲಾಗಿದೆ ಎಂದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ಬ್ಲಾಕ್ ಫಂಗಸ್ ನಂತಹ ಯಾವುದೇ ರೋಗ ಲಕ್ಷಣಗಳು ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಕಂಡು ಬಂದಿರುವುದಿಲ್ಲ. ಜೊತೆಗೆ ಯಾವುದೇ ರೀತಿ ಆ್ಯಕ್ಸಿಜನ್ ಕೊರತೆ ಇಲ್ಲಿಯವರೆಗೂ ಕಂಡು ಬಂದಿರುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಕಸಬಾ ಅರ್.ಐ ಪ್ರಕಾಶ್‍ಕುಮಾರ್, ಪ.ಪಂ ಸಿಇಓ ಲಕ್ಷ್ಮಣ್‍ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಬಸವರಾಜು, ಪವನ್‍ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
