ಕೊರಟಗೆರೆ :
ಮಂಗಳೂರು ಜೈಲಿನಿಂದ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಅಂತಾರಾಜ್ಯ ಕಳ್ಳನೋರ್ವ 4 ವರ್ಷದ ಹಿಂದೆ ಕೊರಟಗೆರೆ ಸರಹದ್ದಿನಲ್ಲಿಯೇ ಕಳ್ಳತನ ಮಾಡಿದ್ದ ಒಡವೆಯನ್ನು ಸ್ನೇಹಿತರ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯೋಜಿಸುತ್ತಿದ್ದ ವೇಳೆ ಕಾಟೇನಹಳ್ಳಿ ಕ್ರಾಸ್ ಬಳಿ ಕೋಳಾಲ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಮಂಗಳೂರು ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿದ್ದ ಅಂತಾರಾಜ್ಯ ಖತರ್ನಾಕ್ ಕಳ್ಳ ನವೀನಕುಮಾರ್ ಎಂಬುವನು ಇತ್ತೀಚೆಗೆ ಕೊರಟಗೆರೆ ಗಡಿಭಾಗದ ಕಾಟೇನಹಳ್ಳಿ ಕ್ರಾಸ್ ಬಳಿ ಮಧ್ಯರಾತ್ರಿ ಒಂಟಿಯಾಗಿ ನಿಂತಿದ್ದನು ಎಂಬುದು ಕೋಳಾಲ ಠಾಣಾ ಪಿಸ್ಐ ಮಹಾಲಕ್ಷ್ಮೀ ನೇತೃತ್ವದ ಪೊಲೀಸರ ತಂಡದ ತನಿಖೆಯಿಂದ ಬಯಲಿಗೆ ಬಂದಿದೆ.
ಕೋಳಾಲ ಪೊಲೀಸ್ ಠಾಣೆಯ ಮುಖ್ಯಪೇದೆ ಮೋಹನಕುಮಾರ್ ಗಸ್ತಿನಲ್ಲಿ ಇರುವಾಗ, ಕಾಟೇನಹಳ್ಳಿ ಕ್ರಾಸಿನ ಬಳಿ ತುಮಕೂರು ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದ ಅಣ್ಣಾಬಾಂಡ್ ಅಲಿಯಾಸ್ ನವೀನ(29) ಎಂಬಾತನನ್ನು ವಶಕ್ಕೆ ಪಡೆದಿದ್ದರು. ನಂತರ ತ್ಯಾಮಗೊಂಡ್ಲು ಬಂಕಿನ ಬಳಿ ಬೆಂಗಳೂರು ನಗರದ ಕುಂಬಳಗೋಡಿನ ಲಾರಿಕೃಷ್ಣಪ್ಪ ಅಲಿಯಾಸ್ ವೆಂಕಟೇಶ(39) ಮತ್ತು ಹಾಸನ ಜಿಲ್ಲೆಯ ಸಕಲೇಶಪುರದ ಪುಟ್ಟರಾಜು(49) ಎಂಬ ಇನ್ನಿಬ್ಬರು ಆರೋಪಿಗಳು ಕೋಳಾಲ ಠಾಣಾ ಪೊಲೀಸರ ಅತಿಥಿ ಆಗಿರುವ ಘಟನೆ ನಡೆದಿದೆ.
2016 ರಲ್ಲಿ ಕೊರಟಗೆರೆ ತಾಲ್ಲೂಕಿನ ಬೈಚೇನಹಳ್ಳಿ ಬಳಿ ದನ ಮೇಯಿಸುತ್ತಿದ್ದ ಒಂಟಿ ಮಹಿಳೆಗೆ ಜೀವ ಬೆದರಿಕೆ ಹಾಕಿ ಸರಗÀಳ್ಳತನ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಪೊಲೀಸ್ಠಾಣೆ ವ್ಯಾಪ್ತಿಯ ನಡುವನಹಳ್ಳಿ ಗೇಟ್ ಬಳಿ ಒಂಟಿ ಮಹಿಳೆಗೆ ಈ ನಾಲ್ಕು ಜನ ಚಾಕು ತೋರಿಸಿ ಮಾಂಗಲ್ಯಸರ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನಡುವನಹಳ್ಳಿ ಕಳ್ಳತನದ ಮಾಂಗಲ್ಯ ಸರವನ್ನು ಕಳ್ಳರ ತಂಡ ಬೆಂಗಳೂರಿನ ಅಟಿಕಾಗೋಲ್ಟ್ ಕಂಪನಿಗೆ ಮಾರಾಟ ಮಾಡಿದ ನಂತರ ಮಂಗಳೂರು ಕಳ್ಳತನ ಪ್ರಕರಣದಲ್ಲಿ ನವೀನ್ಕುಮಾರ್ 2016 ರಲ್ಲಿಯೇ ಜೈಲು ಪಾಲಾಗಿದ್ದಾನೆ. ನಂತರ 2021 ರಲ್ಲಿ ಬಿಡುಗಡೆಯಾಗಿ, ಕೊರಟಗೆರೆಯಲ್ಲಿನ ಕಳ್ಳತನದ ಮಾಂಗಲ್ಯ ಸರವನ್ನು ಸ್ನೇಹಿತರ ಮೂಲಕ ಬೆಂಗಳೂರಿನ ಅಟಿಕಾಗೋಲ್ಟ್ ಕಂಪನಿಗೆ ಮಾರಾಟ ಮಾಡಲು ತೆರಳುವಾಗ ಪೊಲೀಸರ ಅತಿಥಿಯಾಗಿ ಎರಡು ಪ್ರಕರಣ ಬೆಳಕಿಗೆ ಬಂದಿದೆ.
ಅಂತಾರಾಜ್ಯ ಕಳ್ಳತನ ಪ್ರಕರಣ ಭೇದಿಸುವಲ್ಲಿ ಕೋಳಾಲ ಪೊಲೀಸರ ತಂಡ ಯಶಸ್ವಿ ಹೆಜ್ಜೆ ಇಡುತ್ತಿದ್ದು, ಇನ್ನಷ್ಟು ಪ್ರಕರಣ ಬೆಳಕಿಗೆ ಬರಬೇಕಿದೆ. ತುಮಕೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಉದೇಶ್ ಮಾರ್ಗದರ್ಶನ ಮತ್ತು ಕೋಳಾಲ ಪೊಲೀಸ್ ಠಾಣೆಯ ಪಿಎಸ್ಐ ಮಹಾಲಕ್ಷ್ಮೀ ನೇತೃತ್ವದ ಮೋಹನಕುಮಾರ್, ಮಂಜುನಾಥ, ರಾಮಣ್ಣ, ಪುಟ್ಟಸ್ವಾಮಿ ತಂಡವನ್ನು ಪೊಲೀಸ್ ಅಧೀಕ್ಷಕ ಡಾ. ಕೋನವಂಶಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
