ಕೊರಟಗೆರೆ ಆಡಳಿತ ಯಂತ್ರ ಕುಸಿತ-ಅಭಿವೃದ್ದಿ ಮರೀಚಿಕೆ : ಆರೋಪ

ಕೊರಟಗೆರೆ : 

      ಗ್ರಾಮೀಣ ಪ್ರದೇಶದ ಅಭಿವೃದ್ದಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಮಾದರಿ ಆಗಬೇಕಾದ ಕೊರಟಗೆರೆ ಕ್ಷೇತ್ರವು ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಡಳಿತ ಯಂತ್ರ ಕುಸಿದು ಬಡಜನತೆ ಮತ್ತು ರೈತಾಪಿವರ್ಗಕ್ಕೆ ಸಮಸ್ಯೆ ಎದುರಾಗಿ ಅಭಿವೃದ್ದಿ 25 ವರ್ಷ ಹಿಂದಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಆನಂದಪಟೇಲ್ ಆರೋಪ ಮಾಡಿದರು.

      ಅವರು ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಪಂ ವ್ಯಾಪ್ತಿಯ ಚುಂಚೇನಹಳ್ಳಿ, ಹೊಸಪಾಳ್ಯ, ದೊಡ್ಡಪಾಳ್ಯ, ಅವದಾರನಹಳ್ಳಿ, ಅಕ್ಕಾಜಿಹಳ್ಳಿ, ಚಿಕ್ಕಪಾಳ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ಐದು ಪ್ರತ್ಯೇಕ ಗ್ರಾಮ ಘಟಕಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

      ಕೊರಟಗೆರೆ ಆಡಳಿತ ಕೇಂದ್ರವನ್ನು ಪ್ರಶ್ನೆ ಮಾಡುವ ಜನಪ್ರತಿನಿಧಿಯ ಮೌನವೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಸರಕಾರಿ ಇಲಾಖೆಯ ಅಧಿಕಾರಿ ವರ್ಗ ತಮ್ಮ ಕಚೇರಿಗಳಿಗೆ ಮಾತ್ರ ಸೀಮಿತವಾಗಿ ರೈತರ ಅಹವಾಲು ಸ್ವೀಕರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಾಗುವಳಿ ಚೀಟಿ, ಖಾತೆ ಬದಲಾವಣೆ, ಪಿಂಚಣಿ ಹಣ, ಆಧಾರ್ ಕಾರ್ಡು ಸೇರಿದಂತೆ ನೂರಾರು ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ತುಮಕೂರು ರೈತ ಸಂಘದ ಗೌರವಾಧ್ಯಕ್ಷ ಧನಂಜಯಾರಾಧ್ಯ ಮಾತನಾಡಿ, ಕೊರಟಗೆರೆ ತಾಲ್ಲೂಕಿನ ಪ್ರತಿಗ್ರಾಮದಲ್ಲಿಯು ರೈತಸಂಘ ಮತ್ತು ಹಸಿರುಸೇನೆಯ ಗ್ರಾಮ ಘಟಕ ಉದಯ ಆಗಬೇಕು. ರೈತರಿಗೆ ಸಮಸ್ಯೆ ಎದುರಾದರೆ ಒಟ್ಟಾಗಿ ಸಂಘಟಿತ ಹೋರಾಟ ನಡೆಸಿ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ನಮಗಿದೆ. ಕೊರಟಗೆರೆ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳ ನಡುವೆಯು ರೈತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಕೊರಟಗೆರೆ ರೈತ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕಳೆದ 25 ವರ್ಷದಿಂದ ಉಳುಮೆ ಮಾಡುತ್ತಿರುವ ರೈತರಿಗೆ ಬಹುರ್‍ಹುಕುಂ ಕಮಿಟಿಯಿಂದ ಮಂಜೂರು ಆಗಿರುವ 450 ಕ್ಕೂ ಹೆಚ್ಚು ರೈತರ ಸಾಗುವಳಿ ಚೀಟಿಯು ಹಣಕ್ಕೆ ಮಾರಾಟ ಆಗುತ್ತಿದೆ. ಸಾವಿರಾರು ಬಡಜನರ ಪಿಂಚಣಿ ಹಣವು ಕಳೆದ 15 ತಿಂಗಳಿಂದ ಸ್ಥಗಿತವಾಗಿದೆ. ಪರಿಶೀಲನೆ ನಡೆಸಬೇಕಾದ ಆಡಳಿತ ಯಂತ್ರವೆ ಕುಸಿದಿದೆ. ಬೆಂಗಳೂರು ನಗರದ ಉದ್ಯಮಿಗಳಿಗೆ 24 ಗಂಟೆಯಲ್ಲಿ ಆಧಾರ್‍ಕಾರ್ಡು ಮತ್ತು ಐಡಿ ಕಾರ್ಡುಗಳು ಕಾಳಸಂತೆಯಲ್ಲಿ ಸಿಗುತ್ತಿವೆ ಎಂದು ಆರೋಪ ಮಾಡಿದರು.

      ಕಾರ್ಯಕ್ರಮದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಬಸವರಾಜು, ನಾಗರಾಜನಾಯ್ಕ, ಶಿವಕುಮಾರ್, ಹನುಮಂತಪ್ಪ, ರಾಘವೇಂದ್ರ, ನಟರಾಜು, ರೈತ ಮುಖಂಡರಾದ ಪುಟ್ಟರಾಜು, ಲೊಕೇಶ್, ಮಂಜುನಾಥ, ನಾಗರಾಜು, ವೀರಣ್ಣ, ಲಕ್ಷ್ಮನಾಯ್ಕ, ದಾಸಗಿರಿಯಪ್ಪ, ಕುಮಾರ್, ಇಂದ್ರನಾಯ್ಕ, ದೇವರಾಜು, ಶ್ರೀನಿವಾಸ್, ಚಿಕ್ಕರಾಜು, ಜಯಮ್ಮ, ಶಿವಕುಮಾರ್ , ರಂಗನಾಥ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap