‘ಮೊದಲು ಕೊರೋನ ಗಂಭೀರತೆ ತಡೆಯಿರಿ’ – ಡಾllಜಿ.ಪರಮೇಶ್ವರ್

ಕೊರಟಗೆರೆ : 

      ಮುಖ್ಯಮಂತ್ರಿ ಬದಲಾವಣೆ ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದ್ದು, ಕೋವಿಡ್‍ನಂತಹ ಗಂಭೀರ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿ ಕೆಲ ನಾಯಕರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಅವರ ಹೈಕಮಾಂಡ್ ಈ ಬಗ್ಗೆ ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯದ ಜನ ನರಳುವ ಸ್ಥಿತಿ ಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾllಜಿ.ಪರಮೇಶ್ವರ್ ತಿಳಿಸಿದರು.

      ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಪಡಿತರ ವಿತರಕರ ಸಂಘದಿಂದ ಕಡು ಬಡವರಿಗೆ ಆಹಾರ ಕಿಟ್ ವಿತರಿಸಿ, ಕ್ಷೇತ್ರದ ಪುರವರ ಮತ್ತು ಹೊಳವನಹಳ್ಳಿ ಹೋಬಳಿಗಳ ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ನಿರ್ವಹಣೆ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

      ದೇಶದ ಜನರು ಕೋವಿಡ್ 2ನೇ ಅಲೆಯಲ್ಲಿ ತತ್ತರಿಸಿ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ, ರಾಜ್ಯದಲ್ಲೂ ಸಹ ಪರಿಸ್ಥಿತಿ ಇದೇ ರೀತಿ ವಿಕೋಪಕ್ಕೆ ಹೋಗಿ ಜನರು ಪ್ರಾಣ ಹಾನಿಯೊಂದಿಗೆ ಜೀವನ ನಡೆಸಲು ಸಾಧ್ಯವಾಗದೆ ಆಘಾತಕ್ಕೆ ಒಳಗಾಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬಿಜೆಪಿಯ ಕೆಲವು ನಾಯಕರು ದೆಹಲಿಗೆ ಹೋಗಿ ಹೈಕಮಾಂಡ್ ಬಳಿ ಮುಖ್ಯಮಂತ್ರಿ ಬದಲಾವಣೆ ಎನ್ನುವ ಸುದ್ದಿ ಹುಟ್ಟಿಸಿ, ರಾಜ್ಯದಲ್ಲಿ ಮತ್ತು ಸರ್ಕಾರದಲ್ಲಿ ಗೊಂದಲ ಮೂಡಿಸಿದ್ದಾರೆ. ಈ ಗೊಂದಲ ಆಡಳಿತದ ಮೇಲೆ ನೇರ ಪರಿಣಾಮ ಬೀರಲಿದ್ದು, ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ಆಂತರಿಕವಾಗಿ ಗಮನ ಹರಿಸಿಕೊಂಡು ಬೇರೆಡೆ ಕೇಂದ್ರಿಕೃತವಾಗಿದ್ದಾರೆ. ಇದರಿಂದ ರಾಜ್ಯದ ಆಡಳಿತದ ಮೇಲೆ ನೇರ ಪರಿಣಾಮ ಬೀಳುತ್ತದೆ. ಇದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು, ಅವರ ಹೈಕಮಾಂಡ್ ಅವರಿಗೆ ನೇರ ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಇದರಿಂದ ತೊಂದರೆಗೆ ಸಿಲುಕುವುದು ರಾಜ್ಯದ ಸಾರ್ವಜನಿಕರಾಗಿದ್ದು ಮುಖ್ಯಮಂತ್ರಿ ಬದಲಾವಣೆ ಈಗ ಅನಾವಶ್ಯಕ ಎಂದರು.

      ರಾಜ್ಯದಲ್ಲಿ ಕೊರೋನಾ 2ನೇ ಅಲೆ ತೀವ್ರವಾಗಿ ಹರಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದರೂ ಸಹ ಅದರ ಬಗ್ಗೆ ಒಮ್ಮತದ ನಿಲುವು ತೆಗೆದುಕೊಳ್ಳದೆ, ಕೊರೋನಾ ಭೀಕರತೆ ಹೆಚ್ಚಾಗಲು ಬಿಜೆಪಿ ಸರ್ಕಾರದ ಮಂತ್ರಿಗಳಲ್ಲಿನ ಹೊಂದಾಣಿಕೆ ಕೊರತೆ, ಸ್ವಯಂ ಇಚ್ಛೆಯ ಆದೇಶಗಳು, ಮುಖ್ಯಮಂತ್ರಿಗಳಿಗೆ ಸಹಕಾರ ನೀಡದೆ ಅವರನ್ನು ಬಲಹೀನತೆ ಮಾಡಲು ಹೊರಟಿರುವದೇ ಮುಖ್ಯಕಾರಣವಾಗಿದೆ, ಮುಖ್ಯಮಂತ್ರಿಗಳನ್ನು ಬದಲಾಯಿಸುವುದಾದರೆ ತಕ್ಷಣ ಬದಲಾಯಿಸಲಿ, ಇಲ್ಲದಿದ್ದರೆ ಸುಮ್ಮನಿರಲಿ, ಇದು ಬಿಜೆಪಿ ಪಕ್ಷದ ಸಂಪೂರ್ಣ ಆಂತರಿಕ ವಿಚಾರವಾದರೂ ಇಂತಹ ವಿಷಮ ಪರಿಸ್ಥಿತಿಯಲ್ಲಿ ರಾಜ್ಯದ ಜನರ ಪರವಾಗಿ ಹೇಳಬೇಕಾದ ಅವಶ್ಯಕತೆ ಇದೆ ಎಂದ ಅವರು, ಇದೇ ರೀತಿಯಾಗಿ ಸರ್ಕಾರವು ಈಗಾಗಲೆ 2ನೇ ಅಲೆಯ ಕೊರೋನಾವನ್ನು ಗೆದ್ದು ಬಿಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದು ಪರಿಸ್ಥಿತಿ ಹಾಗಿಲ್ಲ. ಇನ್ನು 3ನೆ ಅಲೆಯು ಅತ್ಯಂತ ಭಯಾನಕವಾಗಿ ರಾಜ್ಯದ ಜನತೆಯ ಮೇಲೆ ಅಪ್ಪಳಿಸುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಹಿರಿಯರೊಂದಿಗೆ ಮಕ್ಕಳು ಮತ್ತು ಯುವಕರು ಇದಕ್ಕೆ ಬಲಿಯಾಗುತ್ತಾರೆ. ಮೊದಲು ಲಸಿಕಾ ಆಂದೋಲನವನ್ನು ಸರ್ಕಾರವು ಹೆಚ್ಚು ಚುರುಕು ಮತ್ತು ತ್ವರಿತವಾಗಿ ಮಾಡಲೆಬೇಕು. ಹೊರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಲಸಿಕೆ ನೀಡುವುದಲ್ಲಿ ಬಹಳ ಹಿಂದೆ ಇದೆ, ಇದನ್ನು ಬೇಗ ಸರಿಪಡಿಸಿ, ಸಾಮಾನ್ಯ ಜನರು ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

      ಈ ಸಂದರ್ಭಧಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಕೆ.ಪಿ.ಸಿ.ಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ತುಮುಲ್ ನಿರ್ದೇಶಕರುಗಳಾದ ಈಶ್ವರಯ್ಯ, ಕೊಂಡವಾಡಿ ಚಂದ್ರಶೇಖರ್, ಪ.ಪಂ.ಸದಸ್ಯರುಗಳಾದ ಓಬಳರಾಜು, ನಾಗರಾಜು, ನಂದೀಶ್, ಮುಖಂಡರುಗಳಾದ ಎಲ್.ರಾಜಣ್ಣ, ಗಣೇಶ್, ತುಂಗಮುಂಜುನಾಥ್, ದಾಸರಹಳ್ಳಿ ರಮೇಶ್, ಅರವಿಂದ್, ಕೆ.ಎಲ್.ಎಂ.ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap