ತುಮಕೂರು
ಈಗಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಕೋಮುವಾದಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಎನ್,ಮೂರ್ತಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾಜ್ಯದ 100ಕ್ಕೂ ಹೆಚ್ಚು ದಲಿತ ಮತ್ತು ಪ್ರಗತಿ ಪರ ಸಂಘಟನೆಗಳು ಸಂಯುಕ್ತಾಗಿ ಒಕ್ಕೂಟ ರಚನೆ ಮಾಡಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತಿದೆ. ಈಗಾಗಲೇ ಮಂಡ್ಯ, ಹಾಸನ, ಕೋಲಾರ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ತುಮಕೂರಿನ ಗುಬ್ಬಿ, ಪಾವಗಡ, ಕೊರಟಗೆರೆ ಕ್ಷೇತ್ರಗಳಲ್ಲೂ ಪ್ರವಾಸ ಮಾಡಲಾಗಿದೆ ಎಂದು ತಿಳಿಸಿದರು.
5 ವರ್ಷ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ರೈತರ ನೆರವಿಗೆ ಬಂದಿಲ್ಲ. ಸಹಸ್ರಾರು ರೈತರು ಆತ್ಮಹತ್ಯೆಗೊಳಗಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ. ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲಿಲ್ಲ. ನಿರುದ್ಯೋಗ ನಿವಾರಣೆ ಮಾಡಲಿಲ್ಲ. ಕಾನೂನು ಬಾಹಿರವಾಗು ನೋಟು ಅಮಾನ್ಯೀಕರಣ ಮಾಡಿದರು. ಜಿಎಸ್‍ಟಿ ಜಾರಿ ಮಾಡಿ ಜನರ ಮೇಲೆ ಹೊರೆ ಹೆಚ್ಚಿಸಿದರು. ಬೆರಳೆಣಿಕೆ ಶ್ರೀಮಂತರ ಸಾಲ ಮನ್ನಾ ಮಾಡಿ ಬಡವರ ವಿರೋಧಿ ಎಂಬುದನ್ನು ಸಾಬೀತು ಪಡಿಸಿಕೊಂಡರು. ಕಾವೇರಿ ವಿಚಾರದಲ್ಲಿ ಗೋವಾ ತಮಿಳುನಾಡಿಗೆ ಬೆಂಬಲ ನೀಡಿ ಕರ್ನಾಟಕಕ್ಕೆ ತೀರ ಅನ್ಯಾಯ ಮಾಡಿದ್ದಾರೆ ಎಂದರು.
ಕೇಂದ್ರ ಸರ್ಕಾರ ಪರಿಶಿಷ್ಟ ಅಭಿವೃದ್ಧಿಗೆ ಅವರ ಸಂಖ್ಯೆಳಿಗನುಗುಣವಾಗಿ ಹಣ ಬಿಡುಗಡೆ ಮಾಡಲಿಲ್ಲ. ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುವ ಸಂಚು ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಹಾಗೂ ಮೀಸಲಾತಿ ರದ್ದು ಮಾಡುತ್ತೇವೆ ಎಂದೆಲ್ಲಾ ಹೇಳಿಕೆಗಳನ್ನು ನೀಡಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಲು ವಿನಂತಿ ಮಾಡಿದ್ದು, ಬಿಜೆಪಿ ವಿರುದ್ಧ ತೃತೀಯ ರಂಗ ರಚನೆಯಾಗಿ ರೈತರು,. ದಲಿತರು, ಹಿಂದುಳಿದವರು ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರನ್ನು ಪ್ರತಿನಿಧಿಸುವ ಸರ್ಕಾರವನ್ನು ರಚಿಸುವ ಎಲ್ಲಾ ಸಾಧ್ಯತೆಗಳು ಗರಿಗೆದರಿವೆ. ದಲಿತರು ಮತ್ತು ಪ್ರಗತಿಪರ ಮತದಾರರು ಪ್ರಸಕ್ತ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತಾವಧಿಯಲ್ಲಿ ರೈತರ 48 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಬಿಸಿಯೂಟ, ಅನ್ನಭಾಗ್ಯ ಯೋಜನೆ, ವಿದೇಶದಲ್ಲಿ ಪರಿಶಿಷ್ಟ ಮಕ್ಕಳ ವ್ಯಾಸಾಂಗ ಮಾಡಲು ಪ್ರೋತ್ಸಾಹ ಧನ, ಪರಿಶಿಷ್ಠರ ಅಭಿವೃದ್ಧಿಗೆ ಆಯವ್ಯಯದಲ್ಲಿ ಹೆಚ್ಚು ಧನಸಹಾಯ, ಬಡ್ತಿ ಮೀಸಲಾತಿಯ ಸುಗ್ರೀವಾಜ್ಞೆಗಳಂತಹ ಅನೇಕ ಜನಪರ ಯೋಜನೆಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರೆಸಿ ಪರಿಶಿಷ್ಠ ಜಾತಿಯ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಕಾರ್ಯಾಧ್ಯಕ್ಷ ರಾಜಣ್ಣ, ರಾಜ್ಯ ನಿರ್ದೇಶಕರಾದ ಬೈರಹೊನ್ನಯ್ಯ, ರಾಜ್ಯ ಸಮಿತಿಯ ಸದಸ್ಯರಾದ ಕೋದಂಡರಾಮ, ಜಿಲ್ಲಾ ಸಮಿತಿಯ ನಿರ್ದೇಶಕರಾದ ಪೂಜಾಹನುಮಯ್ಯ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
