5 ಲಕ್ಷ ಬಗರ್ ಹುಕುಂ ಸಾಗುವಳಿ ಅರ್ಜಿ ಶೀಘ್ರ ವಿಲೇವಾರಿ

 ಕೊರಟಗೆರೆ :  

      ರಾಜ್ಯದಲ್ಲಿ ಬಗರ್ ಹುಕುಂ ಅಡಿಯಲ್ಲಿ ರೈತರ ಸಾಗುವಳಿ 5 ಲಕ್ಷ ಅರ್ಜಿಗಳು ಬಾಕಿ ಇದ್ದು, ಕೂಡಲೇ ಅವುಗಳನ್ನು ಕಮಿಟಿ ರಚಿಸಿ ವಿಲೇವಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

      ಅವರು ಪಟ್ಟಣದಲ್ಲಿ ನೂತನ ಉಪನೊಂದಣಾಧಿಕಾರಿಗಳ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಬಡರೈತರು ಸರ್ಕಾರಿ ಜಮೀನುಗಳನ್ನು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಅವರ ಸ್ವಾಧೀನತೆಗೆ ಭಗರ್‍ಹುಕ್ಕುಂ ಸಾಗುವಳಿ ಮುಖಾಂತರ ಬಾಕಿ ಇರುವ 5 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನಾಮ್ತಿ ಜಮೀನುಗಳನ್ನು ಸಹ ಸಾಗುವಳಿ ವಿಲೇವಾರಿಗೆ ಆದೇಶಿಸಲಾಗಿದೆ. ಅದೇ ರೀತಿ 79 (ಎ) (ಬಿ) ಅರ್ಜಿಗಳನ್ನು ವಿಲೇವಾರಿ ಮಾಡಲು ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ 94 ಸಿಸಿ ಅಡಿಯಲ್ಲಿ ಸಾರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಬಡವರಿಗೆ ಖಾತೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಂದಾಯ ಇಲಾಖೆಯಲ್ಲಿ ವೃದ್ಧಾಪ್ಯ ವೇತನಕ್ಕೆ ಅಲೆದಾಟ ಹೆಚ್ಚಾದ ಹಿನ್ನಲೆಯಲ್ಲಿ ಆಧಾರ್ ಕಾರ್ಡ್ ಮಾಹಿತಿಯಂತೆ 60 ವರ್ಷ ಮೀರಿದ ಬಿಪಿಎಲ್ ಕಾರ್ಡ್‍ನ ವಯೋವೃದ್ದರಿಗೆ ಸ್ವತಃ ಕಂದಾಯ ಇಲಾಖೆಯವರೆ ಅವರಿಗೆ ವೃದಾಪ್ಯ ವೇತನವನ್ನು ಮಾಡಿಸಿಕೊಡುವ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.

     ನಾನು ಆರೋಗ್ಯ ಸಚಿವನಾಗಿದ್ದ ಕಾಲದಲ್ಲಿ ಮಡಿಲು ಕಿಟ್ಟನ್ನು ಜಾರಿಗೆ ತರಲಾಯಿತು. ಸಾರಿಗೆ ಸಚಿವನಾಗಿದ್ದಾಗ ನೂತನ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಯಿತು. ಕೊರಟಗೆರೆ ಪಟ್ಟಣದಲ್ಲಿ ಶಾಸಕ ಡಾ.ಜಿ ಪರಮೇಶ್ವರ್ ಅವರು 65 ಲಕ್ಷ ರೂಗಳ ವೆಚ್ಚದಲ್ಲಿ ಉಪನೊಂದಣಾಧಿಕಾರಿಗಳ ಕಛೇರಿಯನ್ನು ನಿರ್ಮಿಸಿ ಉದ್ಘಾಟನೆಗೆ ನನನ್ನು ಕರೆಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ರಾಜ್ಯ ಕಂಡ ಸರಳ ಸಜ್ಜನಿಕೆಯ ಅಜಾತಶತ್ರು ರಾಜಕಾರಣಿ. ಶುದ್ದ ಚಿನ್ನದ ವ್ಯಕ್ತಿತ್ವದ ಅವರು ತಾಲ್ಲೂಕಿನಲ್ಲಿ ನಿರ್ಮಾಣವಾಗುವ ಬಫರ್ ಡ್ಯಾಂ ನಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ದೊಡ್ಡಬಳ್ಳಾಪುರದ ರೀತಿಯ ಪರಿಹಾರವನ್ನು ನೀಡುವಂತೆ ಕೋರಿದ್ದಾರೆ. ಅವರ ಮನವಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅದಕ್ಕಾಗಿಯೇ ಎಷ್ಟೇ ಒತ್ತಡವಿದ್ದರೂ ಡಾ. ಜಿ ಪರಮೇಶ್ವರ್‍ರವರ ಕರೆಗೆ ಓಗೂಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

      ಶಾಸಕ ಡಾ||ಜಿ. ಪರಮೇಶ್ವರ್ ಮಾತನಾಡಿ, ಕರ್ನಾಟಕ ರಾಜ್ಯವು ಕಂದಾಯ ನೂತನ ಅನುಷ್ಠಾನ ಕಾರ್ಯಕ್ರಮದಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ರೈತರಿಗೆ ಪಹಣಿ ನೀಡುವ ಕೆಲಸ ಹಿಂದೆ ಪ್ರಾರಂಭಗೊಂಡಾಗ ಟೀಕೆ ಟಿಪ್ಪಣಿಗಳು ಬಂದವು. ಆದರೆ ಇಡೀ ದೇಶವೇ ಈಗ ಅದನ್ನು ಅನುಸರಿಸುತ್ತಿದೆ. ಕಂದಾಯ ಸಚಿವರಾದ ಆರ್. ಅಶೋಕ್ ರವರು ಯಾವುದೇ ಇಲಾಖೆಯ ಸಚಿವರಾದರೂ ಸಹ ದಕ್ಷತೆಯಿಂದ ಮಾದರಿ ಕಾರ್ಯಕ್ರಮಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ಕೊರಟಗೆರೆ ಕ್ಷೇತ್ರಕ್ಕೆ ಬಂದಿರುವ ಅವರಿಗೆ ಕ್ಷೇತ್ರದ ಜನರ ಪರವಾಗಿ ಬೇಡಿಕೆ ಸಲ್ಲಿಸುವುದು ಜನಪ್ರತಿನಿಧಿಯಾದ ನನ್ನ ಕರ್ತವ್ಯವಾಗಿದೆ.

     ಕೊರಟಗೆರೆ ಕ್ಷೇತ್ರದ ವಸಂತನರಸಾಪುರದಲ್ಲಿ 16 ಸಾವಿರ ಎಕರೆಯ ಕೈಗಾರಿಕಾ ಉದ್ಯಮಕ್ಕೆ ಭೂಸ್ವಾಧೀನವನ್ನು ಮಾಡಿ ಫುಡ್‍ಪಾರ್ಕ್ ಕೂಡ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ದೇಶದಲ್ಲಿ 6 ಜವಳಿ ಪಾರ್ಕ್‍ಗಳನ್ನು ತೆರೆಯುವ ಗುರಿಹೊಂದಿದ್ದು, ವಸಂತನರಸಾಪುರದಲ್ಲಿ ಬಾಂಬೆ-ಚನ್ನೈ ಕಾರ್ಡಿಯಾರ್ ಯೋಜನೆಯಲ್ಲಿ ಒಂದು ಸಾವಿರ ಎಕರೆಯಲ್ಲಿ ಜವಳಿ ಪಾರ್ಕ್‍ನ್ನು ನಿರ್ಮಿಸಿಕೊಡುವಂತೆ ಕಂದಾಯ ಸಚಿವರನ್ನು ಕೋರಿದ್ದು, ಅವರು ಇದರಿಂದ ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಯುವಕ ಯವತಿಯರಿಗೆ ಉದ್ಯೋಗ ದೊರೆತಂತಾಗುತ್ತದೆ. ಹಾಗೆಯೇ ಕೊರಟಗೆರೆ ತಾಲ್ಲೂಕಿನ ಬೈರಗೊಂಡು ಗ್ರಾಮದ ಬಳಿ ಎತ್ತಿನಹೊಳೆ ಯೋಜನೆಯಲ್ಲಿ ನಿರ್ಮಾಣವಾಗುವ ಬಫರ್ ಡ್ಯಾಂಗೆ 2500ಎಕರೆ ಭೂಮಿಯನ್ನು ರೈತರು ಕಳೆದುಕೊಳ್ಳಲಿದ್ದಾರೆ. ಆದರೆ ಪರಿಹಾರ ನೀಡುವಾಗ ಒಂದೇ ಬದುವಿನ ಬೇರೆ ಬೇರೆ ಭೂಮಿಗಳಿಗೆ ಎರಡು ಬಗ್ಗೆಯ ಪರಿಹಾರವನ್ನು ನೀಡಲಾಗುತ್ತದೆ. ಅದನ್ನು ತಪ್ಪಿಸಿ ಎಲ್ಲಾ ರೈತರಿಗೂ ಒಂದೇ ರೀತಿಯ ಪರಿಹಾರವನ್ನು ಕೊಡಿಸಿಕೊಡಲು ಮನವಿ ಮಾಡಿದರು.

      ಈ ಸಮಾರಂಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್‍ವಾಡ್, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ, ಡಿವೈಎಸ್‍ಪಿ ರಾಮಕೃಷ್ಣ, ತಹಶೀಲ್ದಾರ್ ಗೋವಿಂದರಾಜು, ಜಿಲ್ಲಾ ನೋಂದಣಾಧಿಕಾರಿ ಸೈಯದ್ ನೂರ್ ಪಾಷಾ, ಶ್ರೀದೇವಿ.ಎಂ, ಸವಿತಾ, ತಾಲ್ಲೂಕು ಉಪನೊಂದಣಾಧಿಕಾರಿ ಅನಿತಾ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಸತ್ಯನಾರಾಯಣ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap