ವೈದ್ಯರ ನಡೆ-ಹಳ್ಳಿಗಳ ಕಡೆ : ಸೋಂಕಿತರಲ್ಲಿ ಮನಸ್ಥೈರ್ಯ

 ಕೊರಟಗೆರೆ : 

      ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಯೋಜನೆಯಲ್ಲಿ ವೈದ್ಯರು ನೀಡಿದ ಸೇವೆಯು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಭಾಗದ ಕೊರೋನಾ ಸೋಂಕಿತರಿಗೆ ಮನಸ್ಥೈರ್ಯವನ್ನು ತಂದುಕೊಟ್ಟಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

      ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಮುದಾಯ ಭವನದಲ್ಲಿ ಕೊರಟಗೆರೆ ತಾಲ್ಲೂಕಿನ ಅಧಿಕಾರಿಗಳು ಹಾಗೂ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಏರ್ಪಡಿಸಿದ್ದ ವೈದ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ಸಂಕಷ್ಟದ ಸ್ಥಿತಿಯಲ್ಲಿ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ವೈದ್ಯರು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ 36 ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಮನೆ-ಮನೆಗೆ ಭೇಟಿ ನೀಡಿದ್ದಾರೆ. ಸೋಂಕಿತರ ಆರೋಗ್ಯ ಪರೀಕ್ಷಿಸಿ, ಚಿಕಿತ್ಸೆ ನೀಡಿ, ಔಷಧಿ ವಿತರಿಸಿ, ಅವರ ಮನಸ್ಥೈರ್ಯ ತುಂಬಿರುವುದು ನಿಜಕ್ಕೂ ಸಾರ್ಥಕವಾದುದಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಕೊರೋನಾ ಸೋಂಕಿತ ಹೆಣ್ಣು ಮಕ್ಕಳಿಗೆ ಈ ವೈದ್ಯರ ಸಲಹೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಗ್ರಾಮದ ಜನರು ವೈದ್ಯರ ತಂಡಕ್ಕೆ ಉತ್ತಮವಾಗಿ ಸ್ಪಂದಿಸಿ ಸೋಂಕಿತರಿಗೆ ಸಹಾಯವಾಗುವಂತೆ ಮಾಡಿದ್ದಾರೆ. ತಾಲ್ಲೂಕು ಆಡಳಿತ, ವೈದ್ಯರ ತಂಡ, ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಾಧ್ಯಮದವರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಈ ಸೇವೆಗೆ ವೈದ್ಯರ ಜೊತೆ ಕೈಜೋಡಿಸಿದ್ದಾರೆ. ಇದರಿಂದಾಗಿ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ. ದೇಶವನ್ನು ಪೋಲಿಯೋ ಮುಕ್ತ ಭಾರತ ಮಾಡಿದ ಹಾಗೆ, ಎಲ್ಲರೂ ಒಟ್ಟುಗೂಡಿ ಕೊರೋನಾ ಮುಕ್ತ ದೇಶವನ್ನಾಗಿ ಮಾಡಬೇಕಿದೆ. ಇತರ ತಾಲ್ಲೂಕುಗಳಲ್ಲೂ ಸಹ ಸಿದ್ದಾರ್ಥ ವೈದ್ಯಕೀಯ ತಂಡ ಈ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.

      ಸಿದ್ದಾರ್ಥ ವೈದ್ಯಕೀಯ ತಂಡದ ಮುಖ್ಯಸ್ಥ ಡಾ.ವೆಂಕಟೇಶ್ ಮಾತನಾಡಿ, ಈ ಸೇವೆಗೆ ಸಂಸ್ಥೆಯ ಛಾನ್ಸಲರ್ ಆದ ಡಾ.ಜಿ.ಪರಮೇಶ್ವರ್ ತಂಡಕ್ಕೆ ಚೈತನ್ಯ ತುಂಬಿ, ಗ್ರಾಮೀಣ ಜನರ ಬಗ್ಗೆ ಅರಿವು ಮೂಡಿಸಿ, ಕೊರೋನಾದಿಂದ ಗ್ರಾಮೀಣ ಜನರ ಬದುಕನ್ನು ರಕ್ಷಿಸಲು ನಮ್ಮಗಳ ಜವಾಬ್ದಾರಿಯುತ ಕರ್ತವ್ಯದ ಬಗ್ಗೆ ಅರಿವು ಮೂಡಿಸಿದರು. ನಮಗೆ ಕ್ಷೇತ್ರದ ಗ್ರಾಮೀಣ ಜನರ ಸಹಕಾರ ಮತ್ತು ಅಧಿಕಾರಿಗಳ ಮಾರ್ಗದರ್ಶನದಿಂದ ಗ್ರಾಮೀಣ ಭಾಗದ ಸೇವೆಯನ್ನು ಮಾಡಲು ಉತ್ತಮ ಮಾರ್ಗದರ್ಶನ ದೊರೆತಂತಾಯಿತು. ನಮ್ಮಗಳಿಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ತೃಪ್ತಿ ಮನಗಿದೆ ಎಂದರು.

      ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಇಡೀ ದೇಶವೇ ಕೊರೋನಾ ಸಂಕಷ್ಟದಿಂದ ಆಘಾತಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕಿನಲ್ಲಿ ಸಿದ್ದಾರ್ಥ ಸಂಸ್ಥೆಯ ವೈದ್ಯರ ತಂಡ ಮಾಡಿದ ಸೇವೆ ನಿಜಕ್ಕೂ ಅಮೂಲ್ಯವಾದುದು. ಸರ್ಕಾರ ಹಾಗೂ ತಜ್ಞ ವೈದ್ಯರುಗಳು 3ನೆ ಅಲೆಯ ಬಗ್ಗೆ ಎಚ್ಚ್ಚರಿಕೆಯನ್ನು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ಅರಿತು ಬರುವ ಸಂಕಷ್ಟವನ್ನು ಎದುರಿಸಲು ಸಿದ್ದರಾಗ ಬೇಕು. ಮುಂದೆಯೂ ಈ ವೈದ್ಯರ ತಂಡ ನಮ್ಮೊಂದಿಗೆ ಕೈ ಜೋಡಿಸಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊರೋನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ ವೈದ್ಯರುಗಳನ್ನು ಸನ್ಮಾನಿಸಲಾಯಿತು. ಜೊತೆಗೆ ಡಾ.ಜಿ.ಪರಮೇಶ್ವರ್ ಕ್ರೀಡಾ ಮತ್ತು ಸಾಂಸ್ಕøತಿಕ ವೇದಿಕೆಯಿಂದ ತಾಲ್ಲೂಕಿನ ಪೊಲೀಸರಿಗೆ ವೈರಸ್ ಬ್ಲಾಸ್ಟರ್‍ಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ವೈದ್ಯರ ತಂಡದ ಡಾ.ಜಯಪ್ರಕಾಶ್, ಸಿಪಿಐ ಸಿದ್ದರಾಮೇಶ್ವರ, ಇಓ ಶಿವಪ್ರಕಾಶ್, ವೈದ್ಯಾಧಿಕಾರಿ ವಿಜಯ್‍ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷರುಗಳಾದ ಜಯಮ್ಮ, ಶೈಲಜಾ, ಯುವ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರುಗಳಾದ ಎಲ್.ರಾಜಣ್ಣ, ಛಾಯಾಪತಿ, ಲಕ್ಷ್ಮಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link