ಕೊರಟಗೆರೆ :
ಕೇಂದ್ರ ಸರ್ಕಾರವು ರೈತರಿಗೆ ಅನನುಕೂಲವಾಗುವ ನೂತನ ಕಾನೂನುಗಳನ್ನು ಬದಲಾಯಿಸಿದರೆ ರೈತರ ಹೋರಾಟವು ನಿಲ್ಲುತ್ತದೆ. ಈ ಬಗ್ಗೆ ಸರ್ಕಾರಗಳು ಗಮನಹರಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ ಕೋಳಾಲ ಹೋಬಳಿಯ ಯಲಚಿಗೆರೆ ಗ್ರಾಮದಲ್ಲಿ ತಾಲ್ಲೂಕು ಕೃಷಿ ಇಲಾಖೆ, ರೈತಸಂಪರ್ಕ ಕೇಂದ್ರ ಕೋಳಾಲ ವತಿಯಿಂದ ನಡೆದ 2021-22 ನೆ ಸಾಲಿನ ಮುಂಗಾರು ಹಂಗಾಮಿನ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಹಾಗೂ ಇತರೆ 7 ಇಲಾಖೆಗಳಿಂದ ರೈತ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ, ಕ್ಷೇತ್ರದಲ್ಲಿ ಸುಮಾರು ಎರಡು ಕೋಟಿ ರೂ.ಗಳ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿ ಮಾತನಾಡಿದರು.
ಕೊರೋನಾ ರೋಗದಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರು ವ್ಯವಸಾಯವನ್ನು ಉತ್ತಮಗೊಳಿಸಿ ಕೃಷಿಯಿಂದ ಸಾಕಷ್ಟು ಆಹಾರ ಪದಾರ್ಥಗಳನ್ನು ದೇಶಕ್ಕೆ ನೀಡಿದರೆ ಈಗಿರುವ ಸಂಕಷ್ಟಕ್ಕೆ ಸ್ವಲ್ಪ ಮಟ್ಟಿನ ಪರಿಹಾರವನ್ನು ನೀಡಿದಂತಾಗುತ್ತದೆ. ಬಯಲು ಸೀಮೆ ಪ್ರದೇಶವಾದ ಕೊರಟಗೆರೆ ತಾಲ್ಲೂಕಿನಲ್ಲಿ ವರ್ಷದ ವಾಡಿಕೆ ಮಳೆ 637 ಮಿ.ಮೀ ಆಗಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ಮಳೆಯಲ್ಲಿ ಹೆಚ್ಚು ಬೆಳೆ ಬೆಳೆಯುವಂತಹ ಹೊಸ ಆವಿಷ್ಕಾರಗಳನ್ನು ಕೃಷಿ ವಿಜ್ಞಾನಿಗಳು ಮಾಡಿ, ಇಂತಹ ಕೃಷಿ ಅಭಿಯಾನದ ಮುಖಾಂತರ ರೈತರಿಗೆ ತಿಳಿಸಿ, ಉತ್ತೇಜನ ನೀಡಲಾಗುತ್ತದೆ. ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಪ್ರಗತಿ ಹೊಂದಬೇಕಿದ್ದು ರೈತರಿಗೆ ಸಾಕಾಗುವಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಕೃಷಿ ಇಲಾಖೆಯ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದು, ಕೃಷಿ ಚಟುವಟಿಕೆಗೆ ಸಾಕಷ್ಟು ಉತ್ತೇಜನ ನೀಡಲಾಗುವುದು ಎಂದರು.
ಈ ಭಾಗದಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಬಫರ್ ಡ್ಯಾಂ ನಿರ್ಮಾಣವಾಗಲಿದೆ. ಸರ್ಕಾರದ ಯೋಜನೆಯ ಅನುಸಾರ ಸುಮಾರು 24 ಟಿಎಂಸಿ ನೀರನ್ನು ಶೇಖರಣೆ ಮಾಡುವ ಗುರಿ ಇದೆ. ಬಯಲುಸೀಮೆಯ ಪ್ರದೇಶಗಳಿಗೆ ನೀರು ನೀಡುವ ಬೃಹತ್ ಯೋಜನೆಯಲ್ಲಿ ಡ್ಯಾಂ ನಿರ್ಮಾಣದಿಂದ ಜಮೀನು ಕಳೆದುಕೊಳ್ಳುವ ರೈತರ ಪರಿಹಾರದಲ್ಲಿ ಭಾರಿ ವ್ಯತ್ಯಾಸದಿಂದ ತಲೆನೋವಾಗಿ ಪರಿಣಮಿಸಿದೆ. ಒಂದೇ ಭೂಮಿಯ ಎರಡು ಜಮೀನುಗಳು ಭಾರಿ ಅಂತರದ ಪರಿಹಾರ ಮೊತ್ತಕ್ಕೆ ಭೂ ಸ್ವಾದೀನವಾಗುತ್ತಿದೆ. ದೊಡ್ಡಬಳ್ಳಾಪುರದ ವ್ಯಾಪ್ತಿಯ ಜಮೀನಿಗೆ ನೀಡುವ ಪರಿಹಾರವು ಕೊರಟಗೆರೆ ವ್ಯಾಪ್ತಿಯ ರೈತರಿಗೆ ನೀಡಿದರೆ ಮಾತ್ರ ಬಫರ್ ಡ್ಯಾಂಗೆ ಭೂಮಿಯನ್ನು ನೀಡಲಾಗುವುದು. ಇಲ್ಲದಿದ್ದರೆ ಒಂದು ಇಂಚು ಭೂಮಿಯನ್ನು ಸಹ ಬಿಡಲಾಗುವುದಿಲ್ಲ. ಇದಕ್ಕಾಗಿ ಹೋರಾಟಕ್ಕೂ ಸಿದ್ದವಿರುವುದಾಗಿ ಶಾಸಕರು ಘೋಷಿಸಿದರು. ಈ ಹಿಂದಿನ ಸಮ್ಮಿಶ್ರ ಸರ್ಕಾರದ ಸಮಿತಿಯಲ್ಲಿ ಜಾರಿಗೆ ತಂದಿರುವ ಸಮಾನಾಂತರ ಪರಿಹಾರ ಮೊತ್ತದ ನೀತಿಯನ್ನೇ ಈಗಿನ ಆಡಳಿತ ಸರ್ಕಾರ ಯಥಾವತ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗೋವಿಂದರಾಜು, ಸಹಾಯಕ ಕೃಷಿ ಅಧಿಕಾರಿ ನಾಗರಾಜು ಎಚ್, ಕೋಳಾಲ ಕೃಷಿ ಅಧಿಕಾರಿ ಡಿ.ಸಿ ಸೌಂದರ್ಯ, ತಾಂತ್ರಿಕ ಅಧಿಕಾರಿ ನೂರ್ ಆಝಾಂ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ನೂರ್‍ಸಲ್ಮಾ, ಎಇಇ ಗಳಾದ ಮಲ್ಲಣ್ಣ, ಮಂಜುನಾಥ್, ಅಧಿಕಾರಿಗಳಾದ ಲಕ್ಷ್ಮೀನರಸಯ್ಯ, ವಿಜಯ್‍ಕುಮಾರ್, ಅನಂತರಾಜು, ಸುರೇಶ್, ಸಿದ್ದನಗೌಡ, ಕೆ.ಎಂ.ಎಫ್ ನಿರ್ದೇಶಕ ಈಶ್ವರಪ್ಪ, ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಬಿ.ಎಸ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷರುಗಳಾದ ರಾಮಯ್ಯ, ಕೆಂಪರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ವೆಂಕಟೇಗೌಡ, ಎಲ್ ರಾಜಣ್ಣ, ಅರವಿಂದ್ ಇನ್ನಿತರರು ಇದ್ದರು.
ಕೋಳಾಲ ಹೋಬಳಿಯ ಯಲಚಿಗೆರೆ ಗ್ರಾಮದಲ್ಲಿ ಕೃಷಿ ಅಭಿಯಾನಕ್ಕೆ ಶಾಸಕ ಡಾ.ಜಿ ಪರಮೇಶ್ವರ್ ಚಾಲನೆ ನೀಡಿದರು. ಎಡಿಎ ನಾಗರಾಜು ಸೇರಿದಂತೆ ಇತರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ