‘ಸುರೇಶ್ ಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಹಿತಿಯಿಲ್ಲ’ – ಪರಂ

 ಕೊರಟಗೆರೆ :

      ಜಿಲ್ಲೆಯಲ್ಲಿ ಸಾಕಷ್ಟು ಇತರ ಪಕ್ಷಗಳ ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಗಳು ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ದು, ಮಾಜಿ ಶಾಸಕ ಸುರೇಶ್‍ಗೌಡರು ಕಾಂಗ್ರೆಸ್ ಪಕ್ಷ ಸೇರುವ ವದಂತಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

      ಅವರು ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷ ಸೇರಲು ಸಿದ್ದರಿದ್ದಾರೆ. ಈಗಾಗಲೆ ಅವರುಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿ.ಎಲ್.ಪಿ ನಾಯಕ ಸಿದ್ದರಾಮಯ್ಯರವರನ್ನು ಭೇಟಿ ಮಾಡಿರಬಹುದು. ರಾಜ್ಯ ಮಟ್ಟದಲ್ಲಿಯೆ ಕಾಂಗ್ರೆಸ್ ಪಕ್ಷಕ್ಕೆ ಇತರ ಪಕ್ಷಗಳಿಂದ ಶಾಸಕರುಗಳು ಮತ್ತು ವಿಧಾನ ಪರಿಷತ್ ಸದಸ್ಯರುಗಳು, ಮುಂಚೂಣಿ ಮುಖಂಡರುಗಳು ಸೇರಲಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಸ್ವಾಗತವಿದ್ದರೂ ಸಹ ಇತರ ಪಕ್ಷಗಳಿಂದ ಬರುವವರು ಆಯಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಮಾನ ಮನಸ್ಥಿತಿಯಲ್ಲಿ ಹೋಗಲೆಬೇಕಾಗುತ್ತದೆ. ಇದು ಮುಂಬರುವ ವಿಧಾನ ಸಭಾ ಚುನಾವಣೆಯ ಕ್ಷೇತ್ರದ ಅಭ್ಯರ್ಥಿಯ ಮಾನದಂಡದಲ್ಲೂ ಸಹ ಮುಖ್ಯವಾಗಿರುತ್ತದೆ. ಆದರೆ ಮಾಜಿ ಶಾಸಕ ಸುರೇಶ್‍ಗೌಡರ ಕಾಂಗ್ರೆಸ್ ಸೇರ್ಪಡೆ ವದಂತಿ ನನಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದರು.

      ಎತ್ತಿನಹೊಳೆ ಯೋಜನೆ ರೈತರಿಗೆ ಸಮಾನಾಂತರ ಭೂ ಪರಿಹಾರ ನೀಡುವುದು ಮತ್ತು ಹಿಂದಿನ ಯೋಜನೆಯಂತೆ ನೀರು ನಿಲುಗಡೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸಂಬಂಧಪಟ್ಟ ಮಂತ್ರಿ ಮತ್ತು ಅಧಿಕಾರಿಗಳೊಂದಿಗೆ ಹಾಗೂ ಸ್ಥಳೀಯ ಶಾಸಕರೊಂದಿಗೆ ಸಭೆ ಸೇರಿಸಿ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಭೂಮಿ ಕಳೆದುಕೊಳ್ಳುವಂತಹ ರೈತರಿಗೆ ಸಮಾನ ಪರಿಹಾರ ನೀಡುವುದು ಸರ್ಕಾರಗಳ ಕರ್ತವ್ಯ. ಹಿಂದಿನ ಕಾಂಗ್ರೆಸ್ ಮತ್ತು ನಂತರದ ಸಮ್ಮಿಶ್ರ ಸರ್ಕಾರದಲ್ಲಿ ಕೊರಟಗೆರೆ ತಾಲ್ಲೂಕಿಗೆ ನೂತನವಾಗಿ ಪ್ರತ್ಯೇಕ ಎಪಿಎಂಸಿಯನ್ನು ಮಂಜೂರು ಮಾಡಿಸಿ ಅಭಿವೃದ್ದಿ ಗೊಳಿಸಲಾಗಿತ್ತು. ಆದರೆ ಇಂದಿನ ಬಿಜೆಪಿ ಸರ್ಕಾರ ಕೊರಟಗೆರೆ ತಾಲ್ಲೂಕಿನ ಎಪಿಎಂಸಿ ಯನ್ನು ತುಮಕೂರಿಗೆ ಮತ್ತೆ ವಿಲೀನ ಮಾಡಿದೆ. ನನಗೆ ಬಂದ ಮಾಹಿತಿ ಪ್ರಕಾರ ಈ ವಿಲೀನವನ್ನು ತಾಂತ್ರಿಕವಾಗಿ ಪರಿಶೀಲಿಸಿ ಮಾಡದೆ ಯಾರೊ ಒಬ್ಬರ ರಾಜಕೀಯ ಒತ್ತಡಕ್ಕಾಗಿ ವಿಲೀನವಾಗಿದೆ.

      ಇದಕ್ಕೆ ಸಂಪೂರ್ಣ ಉದಾಹರಣೆ ಎಪಿಎಂಸಿ ನಾಮ ನಿರ್ದೇಶನದಲ್ಲಿ ಕೊರಟಗೆರೆ ತಾಲ್ಲೂಕಿನಿಂದ ಯಾರೊಬ್ಬರೂ ಇಲ್ಲದಿರುವುದು. ಇದರ ವಿರುದ್ದ ಸಂಬಂಧಪಟ್ಟ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸಿಕೊಡುವುದಾಗಿ ತಿಳಿಸಿದ್ದಾರೆ, ತಪ್ಪಿದಲ್ಲಿ ಈ ಸಂಬಂದ ಕ್ಷೇತ್ರದ ಜನತೆ ಮತ್ತು ರೈತರೊಂದಿಗೆ ಹೋರಾಟ ಮಾಡಲಾಗುವುದು. ಇಲ್ಲವೇ ಕಾನೂನು ಸಮರವನ್ನು ಮಾಡಬೇಕಾಗುವುದು. ರಾಜ್ಯದಲ್ಲಿ ಪ್ರತಿ ತಾಲ್ಲೂಕಿಗೂ ಎಪಿಎಂಸಿ ವ್ಯವಸ್ಥೆಇದೆ. ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರದಲ್ಲಿ ಬೃಹತ್ ಕುರಿ ಸಂತೆ ನಡೆಯುತ್ತದೆ. ಅದೇ ರೀತಿ ತಾಲ್ಲೂಕಿನಲ್ಲಿ ಹೆಚ್ಚು ಅಡಕೆ, ಆಹಾರ ಧಾನ್ಯಗಳ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಈ ಸತ್ಯವನ್ನೆಲ್ಲಾ ಮರೆಮಾಚಿ ಸ್ವಾರ್ಥಕ್ಕೆ ವಿಲೀನಗೊಳಿಸುವುದು ಕೆಟ್ಟ ರಾಜಕೀಯವನ್ನು ತೋರಿಸುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap