ಬೆಂಗಳೂರು:
ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಮಾಡುತ್ತಿರುವ ನಿರಂತರ ಯಡವಟ್ಟುಗಳು ಅಭ್ಯರ್ಥಿಗಳ ಮೇಲೆ ದುಷ್ಪರಿಣಾಮ ಭಿರುತ್ತಿದೆ. ಈ ಆಯೋಗದ ಪರೀಕ್ಷೆಗಳು ಸಾಕಪ್ಪಾ ಸಾಕು ಎನ್ನುತ್ತಿದ್ದಾರೆ. ಮಾನಸಿಕವಾಗಿಯೂ ಹೈರಾಣಾಗಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ನಡೆದ 384 ಕೆಎಎಸ್ ಪರೀಕ್ಷಾ ಕನ್ನಡ ಪ್ರಶ್ನೆ ಪತ್ರಿಗಳಲ್ಲಿ ಮಾಡಿದ ಯಡವಟ್ಟುಗಳಿಂದಲೇ KPSC ಎಚ್ಚೆತ್ತುಕೊಂಡಿಲ್ಲ. ಸರ್ಕಾರ ಆಯೋಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಬಿಜೆಪಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಕೆಪಿಎಸ್ಸಿಯ ನಿರಂತರ ಯಡವಟ್ಟುಗಳು, ಪ್ರತಿಯೊಂದು ಪರೀಕ್ಷೆಗಳಲ್ಲೂ ಗೊಂದಲಗಳು, ಲೋಪಗಳು, ದೋಷಗಳ ಮೂಲಕ ನ್ಯೂನತೆಗಳು ನಿರಂತರ ಬಯಲಾಗುತ್ತಲೇ ಇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸರ್ಕಾರ ಹಾಗೂ ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ.
ಕರ್ನಾಟಕದ ಮಾತೃ ಭಾಷೆಯಲ್ಲಿಯೇ ಸೂಕ್ತ ಪ್ರಶ್ನೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿ ಪದೇ ಪದೇ ಕೆಎಎಸ್ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿದ್ದಾರೆ. ಕೆಪಿಎಸ್ಸಿ ಬೇಜವಾಬ್ದಾರಿತನ ಪದೇ ಪದೇ ಮರುಕಳಿಸುತ್ತಿರುವುದು ಕೆಪಿಎಸ್ಸಿ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಲೋಪದೋಷಗಳು ಕಂಡು ಬಳಿಕವೂ ಸರ್ಕಾರ ನೀಡುವ ಯಾವ ಆದೇಶಗಳಿಗೂ ಆಯೋಗ ಕ್ಯಾರೆ ಎನ್ನುತ್ತಿಲ್ಲ. ಸ್ವತಃ ಮುಖ್ಯಮಂತ್ರಿಗಳ ಎಚ್ಚರಿಕೆ ನೀಡಿದರೂ ಅದಕ್ಕೆ ಕಿಮ್ಮತ್ತಿಲ್ಲದಿರುವುದು ಈ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ದೂರಿದರು.
ಕಠಿಣ ಪರಿಶ್ರಮದಿಂದ ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಕೆಪಿಎಸಿ ಯಡವಟ್ಟುಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕಿದೆ. ಕೆಪಿಎಸ್ಸಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಕೆಪಿಎಸ್ಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪರೀಕ್ಷಾರ್ಥಿಗಳ ಪರ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
KPSCಯಿಂದ ಮೇಲಿಂದ ಮೇಲೆ ತಪ್ಪು ಕೆಎಎಸ್ ಪರೀಕ್ಷೆಗಳಲ್ಲಿ ಕನ್ನಡ ತಪ್ಪಾಗಿ ಪ್ರಿಂಟ್ ಆಗಿತ್ತು. ಇದು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿತ್ತು. ಕೆಪಿಎಸ್ಸಿ ಅನುವಾದ ಮಾಡಿದ್ದಲ್ಲದೇ ಮೂರು ಬಾರಿ ಕೀ ಉತ್ತರಗಳನೇ ಪರಿಷ್ಕರಿಸಿ ಮತ್ತೊಂದು ಲೋಪ ಎಸಗಿತು. ಮೊದಲೇ ಕೆಪಿಎಸ್ಸಿ ಸೇರಿ ಸರ್ಕಾರಿ ಹುದ್ದೆಗಳ ನೇಮಕಾತಿ ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ. ಅಂಥದರಲ್ಲಿ ಹೀಗೆ ಲೋಪ ಎಸಗಿ ಮೇಲಿಂದ ಮೇಲೆ ತಪ್ಪು ಮಾಡುತ್ತಿದೆ.
ಅಲ್ಲದೇ ಸರ್ಕಾರ, ಮುಖ್ಯಮಂತ್ರಿಗಳು ಈ ಬಗ್ಗೆ ಎಚ್ಚರಿಸಿದರೂ ತಪ್ಪು ತಿದ್ದುಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಪುನಃ ಪರೀಕ್ಷೆಗೆ, ಕೃಪಾಂಕಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಪ್ರತಿಭಟನೆ ಮಾಡಿದ್ದರು. ಆಗಲೂ ಬಿಜೆಪಿ ಪಕ್ಷ ಸರ್ಕಾರದ ವಿರುದ್ಧ ಅಭ್ಯರ್ಥಿಗಳ ಪರ ಧ್ವನಿ ಎತ್ತಿತ್ತು. ಶೀಘ್ರವೇ ಕೆಪಿಎಸ್ಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.