ಬೆಂಗಳೂರು:
ಫೆ. 7 ರಿಂದ ರಜೆ ಮೇಲೆ ತೆರಳಿರುವ ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ವರ್ಗಾವಣೆ ಮಾಡಲಾಗಿದೆ.
ಆಯೋಗದ ಕಾನೂನು ಕೋಶದ ಮುಖ್ಯಸ್ಥರ ನೇಮಕ ಸಂಬಂಧ ಆಯೋಗದ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ ನಡುವೆ ಮೂರ್ನಾಲ್ಕು ತಿಂಗಳಿಂದ ತೀವ್ರ ಸಂಘರ್ಷ ನಡೆಯುತ್ತಿತ್ತು.
ಆ ಹಿನ್ನೆಲೆಯಲ್ಲಿ ಸಂಘರ್ಷವನ್ನು ತಾತ್ಕಾಲಿಕವಾಗಿ ಉಪಶಮನಗೊಳಿಸಲು ಫೆಬ್ರವರಿಯಲ್ಲಿ 10 ದಿನ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದ ಸರ್ಕಾರ ಇದೀಗ ಅವರನ್ನು ಬೇರೆ ಹುದ್ದೆಗೆ ವರ್ಗಾವಣೆ ಮಾಡಿದೆ.
ಲತಾಕುಮಾರಿ ಅವರು ರಜೆಯಲ್ಲಿ ತೆರಳಿದ ಬಳಿಕ ಕಾರ್ಯದರ್ಶಿ ಹುದ್ದೆಯ ಹೊಣೆಯನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಕೆ. ರಾಕೇಶ್ ಕುಮಾರ್ ಅವರಿಗೆ ವಹಿಸಲಾಗಿತ್ತು. ಲತಾಕುಮಾರಿ ಅವರನ್ನು ವರ್ಗಾವಣೆ ಮಾಡಿರುವುದರಿಂದ ರಾಕೇಶ್ ಕುಮಾರ್ ಅವರಿಗೇ ಕಾರ್ಯದರ್ಶಿಯ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಲತಾಕುಮಾರಿ ಅವರು ಸೆ.13 ರಂದು ಆಯೋಗದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಅದಕ್ಕೂ ಮುನ್ನ ಕಾರ್ಯದರ್ಶಿಯಾಗಿದ್ದ ವಿಕಾಸ್ ಕಿಶೋರ್ ಸುರಳ್ಕರ್ ಅವರನ್ನೂ ಸರ್ಕಾರ ಆಯೋಗದ ಅಧ್ಯಕ್ಷರು, ಸದಸ್ಯರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿತ್ತು. ಇದೀಗ ಮತ್ತೆ ಲತಾಕುಮಾರಿ ಅವರನ್ನು ವರ್ಗಾವಣೆ ಮಾಡಿರುವುದರಿಂದ ಆರು ತಿಂಗಳಲ್ಲಿಇಬ್ಬರು ಕಾರ್ಯದರ್ಶಿಗಳ ವರ್ಗಾವಣೆಯಾದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ