ಕ್ಷುದ್ರ ವಿದ್ಯೆಗಾಗಿ ಮಗಳನ್ನೇ ಬಲಿಕೊಟ್ಟ ತಾಯಿ ಬಂಧನ …!

ಜಾರ್ಖಂಡ್‍

   ಪಲಮು ಜಿಲ್ಲೆಯ ನಿವಾಸಿ ಗೀತಾ ದೇವಿ ತನ್ನ ಸ್ವಂತ ಮಗಳನ್ನು ಶೂದ್ರ ದೇವಿಗೆ ನರಬಲಿ ಕೊಡುವ ಉದ್ದೇಶದಿಂದ ಬಲಿಕೊಟ್ಟು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಮಗುವಿನ ಕರುಳನ್ನು ತಿಂದಿದ್ದಾಳೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ  ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಕಸ್ಟಡಿಯಲ್ಲಿರುವ ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಹುಸೈನಾಬಾದ್ ಠಾಣೆ ಪ್ರದೇಶದ ಖರದ್ ಗ್ರಾಮದಲ್ಲಿ ಈ ಕ್ರೂರ ಘಟನೆ ನಡೆದಿದೆ.

   ಪೊಲೀಸ್ ವಿಚಾರಣೆಯ ಸಮಯದಲ್ಲಿ ಆರೋಪಿ ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ನಾನು ಮೊದಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದೆ. ಅಲ್ಲಿಂದ ‘ಪೂಜೆ’ಗೆ ಅಗತ್ಯವಾದ ಬಳೆಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಖರೀದಿಸಿದ್ದೆ. ಮಾಟ ಮಂತ್ರ ಮಾಡಲು ಹೀಗೆ ಮಾಡಿದ್ದೆ ಎಂದು ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಆ ಸಂಜೆ, ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಸಿಕ್‍ನ ಬರ್ವಧೋರಾ ಕಾಡಿಗೆ ಒಂದೂವರೆ ವರ್ಷದ ಮಗಳನ್ನು ಕರೆದುಕೊಂಡು ಹೋಗಿದ್ದೆ ಎಂದು ಆಕೆ ತಿಳಿಸಿದ್ದಾಳೆ.

   ಪೊಲೀಸರ ಪ್ರಕಾರ, ಮಹಿಳೆ ತನ್ನ ಮತ್ತು ಮಗಳ ಬಟ್ಟೆಗಳನ್ನು ತೆಗೆದು ‘ಪೂಜೆ’ ಮಾಡಿ ನಂತರ ನಗ್ನ ಸ್ಥಿತಿಯಲ್ಲಿ ಸ್ವಲ್ಪ ಸಮಯದವರೆಗೆ ನೃತ್ಯ ಮಾಡಿದ್ದಾಳೆ. ಇದಾದ ಬಳಿಕ ಮಹಿಳೆ ತನ್ನ ಪುಟ್ಟ ಮಗಳನ್ನು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ನಂತರ ಅದೇ ಚಾಕುವನ್ನು ಬಳಸಿ ಮಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ನಂತರ ಕುಳಿತು ತನ್ನ ‘ಬಲಿಯಾದ’ ಮಗಳ ಕರುಳು ತಿಂದಿದ್ದಾಳೆ.

   ನಂತರ ಆರೋಪಿ ತನ್ನ ಮಗಳನ್ನು ನೆಲದಲ್ಲಿ ಹೂತುಹಾಕಿ ನಗ್ನ ಸ್ಥಿತಿಯಲ್ಲಿ ಮನೆಗೆ ಮರಳಿದ್ದಳಂತೆ. ಅವಳನ್ನು ಆ ಸ್ಥಿತಿಯಲ್ಲಿ ನೋಡಿದ ಸುತ್ತಮುತ್ತಲಿನ ಜನ ಅವಳ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಮಹಿಳೆಯ ಪತಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 

   ನಂತರ ಮಹಿಳೆಯನ್ನು ಬಂಧಿಸಿ ಅಪರಾಧದ ನಡೆದ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ  ಪೊಲೀಸರು ಮಗುವಿನ ವಿರೂಪಗೊಂಡ ದೇಹವು ನಗ್ನ ಸ್ಥಿತಿಯಲ್ಲಿ ಹೂಳಲ್ಪಟ್ಟಿರುವುದನ್ನು ಕಂಡುಕೊಂಡಿದ್ದಾರೆ. ಅವಳು ಮಾಟಮಂತ್ರ – ವಾಮಾಚಾರವನ್ನು ಕಲಿತಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಮಗಳು ಅಥವಾ ಗಂಡನನ್ನು ತ್ಯಾಗ ಮಾಡಿದರೆ ಮಂತ್ರವಿದ್ಯೆಯಲ್ಲಿ ಸಾಧನೆ ಮಾಡಬಹುದು ಎಂದು ಆಕೆಗೆ ಕನಸು ಬಿದ್ದಿತಂತೆ. ಈ ಕಾರಣ ಆಕೆ ತನ್ನ ಹೆತ್ತ ಮಗಳನ್ನೇ ಬಲಿ ಕೊಟ್ಟಳಂತೆ.