ಮಡಿಕೇರಿ
ಕೊಡಗು ಜಿಲ್ಲೆಯ ಮಡಿಕೇರಿ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೆಎಸ್ಆರ್ಟಿಸಿ ಬಸ್ ಚಾಲಕರು ಶನಿವಾರ ಬೀದಿಗಿಳಿದು, ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ಮಡಿಕೇರಿ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಇವರೆಲ್ಲರಿಗೂ ಕಳೆದ ಕೆಲವು ತಿಂಗಳಿನಿಂದ ಸರಿಯಾಗಿ ವೇತನ ಪಾವತಿಯಾಗಿಲ್ಲ. ಹಾಗಾಗಿ ಬೆಳಗ್ಗಿನಿಂದಲೇ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಇವರನ್ನು ಈ ಮೊದಲು ಬೇರೆಯೊಂದು ಸಂಸ್ಥೆ ಗುತ್ತಿಗೆ ಮೇಲೆ ನೇಮಕ ಮಾಡಿಕೊಂಡಿತ್ತು. ಆದರೆ, ಇದೀಗ ಕಳೆದ ಎರಡು ತಿಂಗಳಿನಿಂದ ಬಹುತೇಕ ಚಾಲಕರ ವೇತನವನ್ನು ಕಾರಣವೇ ಇಲ್ಲದೆ 8 ರಿಂದ 10 ಸಾವಿರ ರೂಪಾಯಿವರೆಗೆ ಕಡಿತ ಮಾಡಲಾಗಿದೆ. ಇವರ ಖಾತೆಗೆ ಇಎಫ್ ಹಣ ಕೂಡ ವರ್ಗಾವಣೆಯಾಗಿಲ್ಲ. ಇದರ ಬಗ್ಗೆ ಕೇಳಿದರೆ ‘‘ಪೂಜ್ಯಾಯ ಸಂಸ್ಥೆ’’ ಉಡಾಫೆಯ ಉತ್ತರ ನೀಡುತ್ತಿದೆ ಎಂಬುದು ಚಾಲಕರ ಆರೋಪವಾಗಿದೆ.
ಚಾಲಕರಿಗೆ 25 ಸಾವಿರ ರೂ. ಸಂಬಳದಲ್ಲಿ 2 ಸಾವಿರ ರೂ. ಪಿಎಫ್ ಕಡಿತ ಮಾಡಿ ಉಳಿದ 23 ಸಾವಿರ ರೂ. ಹಣ ಅಕೌಂಟ್ಗೆ ಹಾಕಬೇಕು. ಆದರೆ 23 ಸಾವಿರ ರೂ. ಬದಲು 10 ಸಾವಿರ, 14 ಸಾವಿರ ಹೀಗೆ ಅಲ್ಪ ಮೊತ್ತವನ್ನ ಜಮೆ ಮಾಡಲಾಗುತ್ತಿದೆ ಎಂಬುದು ಚಾಲಕರ ವಾದ. ಈ ಬಗ್ಗೆ ಡಿಪೋ ಡಿಸಿ ಬಳಿ ಪ್ರಶ್ನಿಸಿದಾಗ, ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಾರೆ. ಹಾಗೆ ಹೇಳುವುದು ಬಿಟ್ಟರೆ ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂಬುದು ಚಾಲಕರ ದೂರಾಗಿದೆ.