ಬೆಂಗಳೂರು
ಅಂದು 40 ಪರ್ಸೆಂಟ್ ಸರ್ಕಾರದ ಆರೋಪ. ಈಗ 60 ಪರ್ಸೆಂಟ್ ಕಮಿಷನ್ ಸರ್ಕಾರದ ಆರೋಪ. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತೆ ಕಮಿಷನ್ ವಿಚಾರ ಸದ್ದು ಮಾಡುತ್ತಿದೆ. 40 ಪರ್ಸೆಂಟ್ ಕಮಿಷನ್ ಅಸ್ತ್ರ ಹೂಡಿ, ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದ ಕಾಂಗ್ರೆಸ್ ವಿರುದ್ಧ ಈಗ ಹೊಸ ಗಂಭೀರ ಆರೋಪ ಕೇಳಿಬಂದಿದೆ. ಗುತ್ತಿಗೆದಾರನ ಆತ್ಮಹತ್ಯೆ ಜಟಾಪಟಿ ತಾರಕಕ್ಕೇರಿರುವ ಹೊತ್ತಿನಲ್ಲೇ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ 60 ಪರ್ಸೆಂಟ್ ಕಮಿಷನ್ ಕಿಡಿ ಹೊತ್ತಿಸಿದ್ದಾರೆ.
ಪ್ರತಿ ಇಲಾಖೆಯಲ್ಲೂ ಸಚಿವರಿಗೆ ಮೊದಲು ಪರ್ಸೆಂಟೇಜ್ ಕೊಟ್ಟು ಆಮೇಲೆ ಹಣ ಬಿಡುಗಡೆ ಮಾಡುವ ಕೆಲಸ ಆಗುತ್ತಿದೆ ಎಂದು ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ, ಸಾಬೀತು ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಸರ್ಕಾರದ ವಿರುದ್ಧ 60 ಪರ್ಸೆಂಟ್ ಲಂಚದ ಆರೋಪ ಮಾಡಿರುವ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಆರೋಪ ಸಾಬೀತುಪಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಹತಾಶರಾಗಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.
ಒಟ್ಟಿನಲ್ಲಿ, ಅಂದು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬಿಜೆಪಿಯನ್ನು ಆರೋಪ ಮಾಡಿದ್ದ ಕಾಂಗ್ರೆಸ್ ವಿರುದ್ಧ ಇದೀಗ 60 ಪರ್ಸೆಂಟ್ ಆರೋಪ ಕೇಳಿಬಂದಿದೆ. ಇದು ಪ್ರಮುಖ ನಾಯಕರ ಮಧ್ಯೆ ಮಾತಿನ ಜಟಾಪಟಿಗೂ ವೇದಿಕೆಯಾಗಿದೆ.
