ಸರ್ಕಾರದ ಅಳಿವು ಉಳಿನ ಬಗ್ಗೆ ಭವಿಷ್ಯ ನುಡಿದ ಕುಮಾರಸ್ವಾಮಿ….!

ಬೆಂಗಳೂರು:

    ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಡಿಸೆಂಬರ್ ಅಂತ್ಯದೊಳಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪತನಗೊಳ್ಳುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ, ಮಂಡ್ಯ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಭವಿಷ್ಯ ನುಡಿದಿದ್ದಾರೆ.

   ಬಿಜೆಪಿ– ಜೆಡಿಎಸ್‌ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಪೈಪೋಟಿಯೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಬಿಜೆಪಿ– ಜೆಡಿಎಸ್‌ ನಡುವೆ ಸಹಜ ಮೈತ್ರಿಯಾಗಿದ್ದು 2004ರಲ್ಲಿ. ಆಗ ನಾವು ಒಂದಾಗಿ ನೀಡಿದ 20 ತಿಂಗಳ ಆಡಳಿತವನ್ನು ಜನ ಇಂದಿಗೂ ನೆನೆಯುತ್ತಾರೆ’ ಎಂದು ಹೇಳಿದರು.

    ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲಿಲ್ಲವೆಂದು ಆರೋಪಿಸಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ನನ್ನದಲ್ಲದ ತಪ್ಪಿಗಾಗಿ ಬಲಿಪಶು ಮಾಡಲಾಯಿತು. ಅಂದಿನಿಂದ ಇಂದಿನವರೆಗೆ 17 ವರ್ಷ ವನವಾಸ ಮಾಡಿದ್ದೇನೆ. ಪಕ್ಷ ಕಟ್ಟಲು ಒಬ್ಬಂಟಿಯಾಗಿ ಹೋರಾಡಿದ್ದೇನೆ, ಆದರೆ ಯಶಸ್ವಿಯಾಗಲಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅವರ ನಡವಳಿಕೆ ನೋಡಿದ್ದೇನೆ, ಮೇಕೆದಾಟು ವಿಚಾರ ಹೇಳಿಕೊಂಡು ಮತ ಪಡೆಯುವ ದಾರಿದ್ರ್ಯ ಜೆಡಿಎಸ್ ಪಕ್ಷ ಹಾಗೂ ದೇವೇಗೌಡರಿಗೆ ಅಗತ್ಯವಿಲ್ಲ. ಬಿರಿಯಾನಿ ಊಟ ಮಾಡಿಕೊಂಡು ಪಾದಯಾತ್ರೆ ಮಾಡಿದ್ರೆ ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಲ್ಲ ಎಂದು ಛೇಡಿಸಿದರು.

    ನಾವು ಅಧಿಕಾರದಲ್ಲಿದ್ದಾಗ ಮಂಡ್ಯ ಜಿಲ್ಲೆ ಹಸಿರಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ ಬಂದಿದೆ. ರೈತರ ಮನೆ ಹಾಳು ಮಾಡುತ್ತಿರೋರು ಕಾಂಗ್ರೆಸ್ ನವರು. ಜಿಲ್ಲೆಯಲ್ಲಿ ಬೆಳೆ ಬಿತ್ತನೆ ಮಾಡಬೇಡಿ ಎಂದ ಏಕೈಕ ನಾಯಕ ನನ್ನ ಹಳೇ ಸ್ನೇಹಿತ ಎಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿರುದ್ದ ಕುಮಾರಸ್ವಾಮಿ ಹರಿಹಾಯ್ದರು.

    ಪ್ರಸ್ತುತ ಎದುರಾಗಿರುವ ಲೋಕಸಭಾ ಚುನಾವಣೆ ಧರ್ಮಯುದ್ದವಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಯ ದುಡ್ಡಿಗೆ ಜಿಲ್ಲೆಯ ಮತದಾರರು ಬಲಿಯಾಗುವುದಿಲ್ಲ ಎಂಬ ನಂಬಿಕೆ ಇದ್ದು, ಮೈತ್ರಿ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಒಟ್ಟಾಗಿ ಚುನಾವಣಾ ಪ್ರಚಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು. 

   ವ್ಯವಸ್ಥೆಯಲ್ಲಿರುವ ಕಾನೂನು ಅರಿತು ಮಾತನಾಡಬೇಕು. ನಮ್ಮ ತೆರಿಗೆ ನಮ್ಮ ಹಕ್ಕು ಎಂದರೆ ಆಗಲ್ಲ. ಮಂಡ್ಯ ಮೇಲೆ ಕೆಟ್ಟ ದೃಷ್ಟಿ ಬೇಡ ಎಂದು ಹಳೇ ಸ್ನೇಹಿತ ಹೇಳಿದ್ದಾನೆ. ನಮ್ಮ ದೃಷ್ಟಿ ಇದ್ದಾಗ ಜಿಲ್ಲೆಯಲ್ಲಿ ಮಳೆ- ಬೆಳೆ ಚೆನ್ನಾಗಿ ಆಗ್ತಿತ್ತು. ನಿಮ್ಮ ದೃಷ್ಟಿ ಬಿದ್ದ ಮೇಲೆ ಬರಗಾಲ ಬಂದಿದೆ ಎಂದು ವ್ಯಂಗ್ಯವಾಡಿದರು.

   ಅನಾರೋಗ್ಯದಲ್ಲಿರುವ ಕುಮಾರಸ್ವಾಮಿ ಅವರು ಚುನಾವಣೆ ನಡೆಸಲು ವ್ಹೀಲ್ ಚೇರ್‌ನಲ್ಲಿ ಬರ್ತೀರಾ ಎಂದು ಟೀಕಿಸಿದ್ದಾರೆ. ನನಗೆ ಆ ದುರ್ಗತಿ ಬಂದಿಲ್ಲ. ನಾಟಕ ಆಡಿಕೊಂಡು ನಾನು ಬರಲ್ಲ. ಯಾರಿಗೂ ಅಪನಂಬಿಕೆ ಬೇಡ. ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆಂದರು.

   ಇದೇ ವೇಳೆ ಹಾಲಿ ಸಂಸದೆ ಸುಮಲತಾ ಅವರ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಾಮಪತ್ರ ಸಲ್ಲಿಕೆ ಕುರಿತು ಮಾತನಾಡಿ, ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸುತ್ತೇನೆಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap